ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನೇನು 30-40 ಓವರ್ ನಡೆದಿದ್ದರೆ ಪಂದ್ಯವೇ ಮುಗಿದು ಹೋಗುತ್ತಿತ್ತು. ಪಂದ್ಯವೂ ರೋಚಕ ಘಟ್ಟದಲ್ಲಿತ್ತು. ಆಗಲೇ ವರುಣನ ಆಗಮನವಾಗಿದೆ.
ನಾಲ್ಕನೇ ದಿನದಾಟಕ್ಕೆ ಮುನ್ನ ದ.ಆಫ್ರಿಕಾ ಭಾರತ ನೀಡಿದ 240 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಇದರಿಂದಾಗಿ ಆಫ‍್ರಿಕಾ ಗೆಲುವಿಗೆ 122 ರನ್ ಗಳಿಸಿದ್ದರೆ ಸಾಕಿತ್ತು.
ಆದರೆ ಟೀಂ ಇಂಡಿಯಾದ ಬೌಲಿಂಗ್ ವಿಭಾಗದ ಗುಣಮಟ್ಟ ನೋಡಿದರೆ ಈ ಪಂದ್ಯದಲ್ಲಿ ಭಾರತಕ್ಕೂ ಗೆಲ್ಲುವ ಅವಕಾಶವಿತ್ತು. ಹೀಗಾಗಿ ರೋಚಕ ಘಟ್ಟದಲ್ಲಿದ್ದ ಪಂದ್ಯ ನಡೆಯುವುದನ್ನೇ ಎದಿರು ನೋಡುತ್ತಿದ್ದ ಪ್ರೇಕ್ಷಕರಿಗೆ ಇಂದು ಮಳೆ ನಿರಾಸೆ ಮೂಡಿಸಿದ್ದಾರೆ. ಇಂದಿನ ದಿನದಾಟ ಇದುವರೆಗೆ ಆರಂಭವಾಗಿಲ್ಲ. ಒದ್ದೆ ಮೈದಾನವಿರುವ ಕಾರಣ ಮೈದಾನ ಸಿಬ್ಬಂದಿಗಳು ಪಿಚ್ ಒಣಗಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮುಂದಿನ ತೀರ್ಮಾನವನ್ನು ಅಂಪಾಯರ್ ಗಳು ತೆಗೆದುಕೊಳ್ಳಲಿದ್ದಾರೆ.