ಮುಂಬೈ: ಈ ವರ್ಷ ನಡೆಯಲಿರುವ ವಿಶ್ವ ಇಲೆವೆನ್ ಮತ್ತು ಏಷ್ಯಾ ಇಲೆವೆನ್ ನಡುವಿನ ಕ್ರಿಕೆಟ್ ಕೂಟದ ಒಂದು ಪಂದ್ಯದ ಆತಿಥ್ಯ ಪಡೆದು ವಿಶ್ವದ ಬೃಹತ್ ಮೈದಾನವನ್ನು ಲೋಕಾರ್ಪಣೆಗೊಳಿಸುವ ಬಿಸಿಸಿಐ ಅಧ್ಯಕ್ಷ ಗಂಗೂಲಿ ಕನಸು ಕನಸಾಗಿಯೇ ಉಳಿಯಲಿದೆ.
ಬಾಂಗ್ಲಾದೇಶ ಆಯೋಜಿಸುತ್ತಿರುವ ವಿಶ್ವ ಇಲೆವೆನ್-ಏಷ್ಯಾ ಇಲೆವೆನ್ ನಡುವಿನ ಟಿ20 ಪಂದ್ಯವನ್ನು ಗುಜರಾತ್ ನಲ್ಲಿ ನಿರ್ಮಾಣವಾದ ವಿಶ್ವದ ಬೃಹತ್ ಮೈದಾನ ಎಂಬ ದಾಖಲೆಗೆ ಪಾತ್ರವಾಗಲಿರುವ ಸರ್ದಾರ್ ಪಟೇಲ್ ಮೈದಾನದಲ್ಲಿ ಆಯೋಜಿಸುವ ಮೂಲಕ ಲೋಕಾರ್ಪಣೆಗೊಳಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿತ್ತು. ಆದರೆ ಆ ಯೋಜನೆ ಕೈಗೂಡುತ್ತಿಲ್ಲ. ಎರಡೂ ಪಂದ್ಯಗಳೂ ಬಾಂಗ್ಲಾದ ಮೀರ್ ಪುರ್ ನಲ್ಲಿಯೇ ನಡೆಯಲಿದೆ.
ಮಾರ್ಚ್ ನಲ್ಲಿ ಈ ಪಂದ್ಯ ನಡೆಯುವ ಸಾಧ್ಯತೆಯಿದೆ. ಭಾರತದ ಪ್ರಮುಖ ಕ್ರಿಕೆಟಿಗರು ಏಷ್ಯಾ ಇಲೆವೆನ್ ಪರ ಆಡಲಿದ್ದಾರೆ. ಆದರೆ ಈ ಕೂಟದಲ್ಲಿ ಪಾಕಿಸ್ತಾನ ಸೇರ್ಪಡೆಯಾಗಿಲ್ಲ. ಈ ಕೂಟವನ್ನು ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ತನ್ನ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರ 100 ನೇ ಜನ್ಮಜಯಂತಿ ಸ್ಮರಣಾರ್ಥ ಆಯೋಜಿಸುತ್ತಿದೆ.