ಮುಂಬೈ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿ ಇಷ್ಟು ಸಮಯ ಕಳೆದಿದ್ದರೂ ಕ್ರಿಕೆಟ್ ಕಾಮೆಂಟರಿ ಮತ್ತು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರನಾಗಿ ಕೆಲಸ ಮಾಡಿದ್ದು ಬಿಟ್ಟರೆ ಕ್ರಿಕೆಟ್ ನಲ್ಲಿ ಕೆಲಸ ಮಾಡಿರಲಿಲ್ಲ.
ಆದರೆ ಇದೀಗ ಸಚಿನ್ ಇದೇ ಮೊದಲ ಬಾರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಷ್ಟಕ್ಕೂ ಸಚಿನ್ ಕೋಚ್ ಆಗುತ್ತಿರುವುದು ಭಾರತೀಯ ತಂಡಕ್ಕಲ್ಲ.
ಬದಲಾಗಿ ಬುಶ್ ಫೈರ್ ಕ್ರಿಕೆಟ್ ಬ್ಯಾಶ್ ಕ್ರಿಕೆಟ್ ಕೂಟದಲ್ಲಿ ಪಾಂಟಿಂಗ್ ಇಲೆವೆನ್ ಮತ್ತು ವಾರ್ನೆ ಇಲೆವೆನ್ ನಡುವೆ ಪಂದ್ಯ ನಡೆಯಲಿದ್ದು, ಪಾಂಟಿಂಗ್ ಇಲೆವೆನ್ ತಂಡಕ್ಕೆ ಸಚಿನ್ ಕೋಚ್ ಆಗಲಿದ್ದಾರೆ. ಅಂದರೆ ಪಾಂಟಿಂಗ್ ನೇತೃತ್ವದ ತಂಡಕ್ಕೆ ಸಚಿನ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಶೇನ್ ವಾರ್ನ್ ತಂಡಕ್ಕೆ ಖ್ಯಾತ ಮಾಜಿ ವೇಗಿ ಕರ್ಟ್ನಿ ವಾಲ್ಶ್ ಕೋಚ್ ಆಗಿರಲಿದ್ದಾರೆ. ಈ ವಿಚಾರವನ್ನು ಪ್ರಕಟಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಕೆವಿನ್ ರಾಬರ್ಟ್ಸ್ ಸಚಿನ್ ಆಗಮನ ನಮಗೆ ನಿಜಕ್ಕೂ ಗೌರವದ ವಿಚಾರ ಎಂದಿದ್ದಾರೆ.