ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಅಂತಿಮ ಟಿ20 ಪಂದ್ಯವನ್ನು 42 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಗೆಲುವಿನೊಂದಿಗೆ ಸರಣಿ ಮುಕ್ತಾಯಗೊಳಿಸಿದೆ.
ಇದರೊಂದಿಗೆ ಟೀಂ ಇಂಡಿಯಾ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಕೇವಲ ಮೊದಲ ಪಂದ್ಯವನ್ನು ಮಾತ್ರ ಭಾರತ ಸೋತಿದೆ. ಶುಬ್ಮನ್ ಗಿಲ್ ನೇತೃತ್ವದಲ್ಲಿ ಯುವ ಆಟಗಾರರೇ ತುಂಬಿದ್ದ ಟೀಂ ಇಂಡಿಯಾ ಸರಣಿ ಗೆದ್ದು ಸಂಭ್ರಮಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
ಈ ಪಂದ್ಯದಲ್ಲಿ ಆರಂಭಿಕರು ಕೈ ಕೊಟ್ಟರು. ಶುಬ್ಮನ್ ಗಿಲ್, ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್ ತಂಡದ ಮೊತ್ತ 40 ರನ್ ಗಳಿಸುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಿದ್ದರು. ಈ ವೇಳೆ ಜೊತೆಯಾದ ರಾಜಸ್ಥಾನ್ ರಾಯಲ್ಸ್ ಜೋಡಿ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ತಂಡಕ್ಕೆ ಚೇತರಿಕೆ ನೀಡಿದರು. ಸಂಜು ಒಟ್ಟು 45 ಎಸೆತ ಎದುರಿಸಿ 58 ರನ್ ಗಳಿಸಿದರೆ ಪರಾಗ್ 24 ಎಸೆತಗಳಿಂದ 22 ರನ್ ಗಳಿಸಿ ಸಾಥ್ ನೀಡಿದರು. ಸಂಜು ಆಟ ಅಭಿಮಾನಿಗಳಿಗೆ ಖುಷಿ ನೀಡಿತು. ಕೊನೆಯಲ್ಲಿ ಶಿವಂ ದುಬೆ ಕೇವಲ 12 ಎಸೆತಗಳಿಂದ 26 ರನ್ ಚಚ್ಚಿ ತಂಡಕ್ಕೆ ಉತ್ತಮ ಮೊತ್ತ ದಾಖಲಿಸಲು ನೆರವಾದರು.
ಈ ಮೊತ್ತ ಬೆನ್ನತ್ತಿದ ಜಿಂಬಾಬ್ವೆ 18.3 ಓವರ್ ಗಳಲ್ಲಿ 125 ರನ್ ಗಳಿಗೆ ಆಲೌಟ್ ಆಯಿತು. ಮರ್ಮಾನಿ 27, ಮೇಯರ್ಸ್ 34, ಫರಾಜ್ ಅಕ್ರಮ್ 27 ರನ್ ಗಳಿಸಿದರು. ಭಾರತದ ಪರ ಮುಕೇಶ್ ಕುಮಾರ್ 4, ಶಿವಂ ದುಬೆ 2 ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ಗಿಲ್ ನಾಯಕನಾಗಿ ಮೊದಲ ಸರಣಿಯಲ್ಲೇ ಗೆದ್ದು ಬೀಗಿದಂತಾಗಿದೆ.