ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಇಂದಿನ ಪಂದ್ಯ ಗೆದ್ದರೆ ಯುವ ನಾಯಕ ಶುಬ್ಮನ್ ಗಿಲ್ ಗೆ ಅದೃಷ್ಟ ಕುದುರಿದಂತಾಗಲಿದೆ.
ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 2-1 ರಿಂದ ಮುನ್ನಡೆಯಲ್ಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಗೆದ್ದರೂ ಸರಣಿ ಕೈ ವಶ ಮಾಡಿಕೊಳ್ಳಲಿದೆ. ನಾಯಕನಾಗಿ ಶುಬ್ಮನ್ ಗಿಲ್ ಗೆ ಇದು ಮೊದಲ ಸರಣಿಯಾಗಿತ್ತು. ಈ ಸರಣಿಯಲ್ಲಿ ಅವರು ಗೆದ್ದರೆ ಮುಂದೆ ಹಾರ್ದಿಕ್ ಬಳಿಕ ಟಿ20 ತಂಡದ ನಾಯಕತ್ವಕ್ಕೆ ಮತ್ತೊಬ್ಬ ಸ್ಪರ್ಧಿ ಸಿಕ್ಕಂತಾಗಲಿದೆ.
ಟೀಂ ಇಂಡಿಯಾ ಕಳೆದ ಪಂದ್ಯದಲ್ಲಿ ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್, ಶಿವಂ ದುಬೆಗೆ ಅವಕಾಶ ನೀಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಸರಣಿಯಲ್ಲಿ ಶುಬ್ಮನ್ ಗಿಲ್ ನಾಯಕನ ಆಟವಾಡಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಂದರೆ ನಾಯಕತ್ವದ ಒತ್ತಡ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿಲ್ಲ. ಇದು ಪ್ಲಸ್ ಪಾಯಿಂಟ್.
ಈ ಪಂದ್ಯಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಬೌಲಿಂಗ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಆಡಿದ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಆವೇಶ್ ಖಾನ್ ಕೂಡಾ ಸಿಕ್ಕ ಅವಕಾಶನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಈ ಸರಣಿ ಗೆಲ್ಲುವ ಫೇವರಿಟ್ ತಂಡ ಭಾರತವೆನಿಸಿಕೊಂಡಿದೆ. ಈ ಪಂದ್ಯ ಅಪರಾಹ್ನ 4.30 ಕ್ಕೆ ಆರಂಭವಾಗಲಿದೆ.