ಹರಾರೆ: ಜಿಂಬಾಬ್ವೆ ವಿರುದ್ಧ ನಾಲ್ಕನೇ ಟಿ20 ಪಂದ್ಯವನ್ನು 10 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ಟೀಂ ಇಂಡಿಯಾ ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಟೀಂ ಇಂಡಿಯಾ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಜಿಂಬಾಬ್ವೆ ಆರಂಭ ಉತ್ತಮವಾಗಿತ್ತು. ಆರಂಭಿಕರು 8 ಓವರ್ ಗಳಲ್ಲಿ 63 ರನ್ ಕಲೆ ಹಾಕಿದರು. ಈ ವೇಳೆ ಅಭಿಷೇಕ್ ಶರ್ಮ ಎಸೆತದಲ್ಲಿ 32 ರನ್ ಗಳಿಸಿದ್ದ ಮರುಮಾನಿಯನ್ನು ಔಟ್ ಮಾಡಿದರು. ಅವರ ಹಿಂದೆಯೇ ಮಧೆವೆರೆ 25 ರನ್ ಗಳಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಸಿಕಂದರ್ ರಾಝಾ 46 ರನ್ ಗಳಿಸಿ ಜಿಂಬಾಬ್ವೆ ಪರ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ಅಂತಿಮವಾಗಿ ಜಿಂಬಾಬ್ವೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಭಾರತದ ಪರ ಖಲೀಲ್ ಅಹ್ಮದ್ 2, ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕರಾದ ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್ ಜೋಡಿ ದಾಖಲೆಯ ಜೊತೆಯಾಟವಾಡಿತು. ಜಿಂಬಾಬ್ವೆ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದ ಜೈಸ್ವಾಲ್ 53 ಎಸೆತಗಳಿಂದ ಅಜೇಯ 93 ರನ್ ಗಳಿಸಿದರೆ ಅವರಿಗೆ ಸಾಥ್ ನೀಡಿದ ಗಿಲ್ 39 ಎಸೆತಗಳಿಂದ ಅಜೇಯ 58 ರನ್ ಗಳಿಸಿದರು. ಈ ಇಬ್ಬರೂ ಮುರಿಯದ ಮೊದಲ ವಿಕೆಟ್ ಗೆ 156 ರನ್ ಗಳಿಸಿ ಟಿ20 ಕ್ರಿಕೆಟ್ ನಲ್ಲಿ ಎರಡನೇ ಬಾರಿಗೆ 150 ಪ್ಲಸ್ ರನ್ ಆರಂಭಿಕ ಜೊತೆಯಾಟವಾಡಿದರು.
ಅಂತಿಮವಾಗಿ 15.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 156 ರನ್ ಗಳಿಸಿದ ಭಾರತ 150 ಪ್ಲಸ್ ಟಾರ್ಗೆಟ್ ನ್ನು 28 ಎಸೆತ ಬಾಕಿ ಇರುವಂತೆಯೇ ತಲುಪಿ ದಾಖಲೆ ಮಾಡಿತು. ಈ ಗೆಲುವಿನೊಂದಿಗೆ ಭಾರತ 3-1 ರಿಂದ ಸರಣಿ ತನ್ನದಾಗಿಸಿಕೊಂಡಿದೆ. ನಾಳೆ ನಡೆಯಲಿರುವ ಅಂತಿಮ ಪಂದ್ಯ ಔಪಚಾರಿಕವಾಗಿದೆ.