ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಮುಕ್ತಾಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಈ ಮೂಲಕ 308 ರನ್ ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ 376 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ 149 ರನ್ ಗಳಿಗೆ ಆಲೌಟ್ ಆಗುವ ಮೂಲಕ 227 ರನ್ ಗಳ ಹಿನ್ನಡೆ ಅನುಭವಿಸಿತು. ಬೃಹತ್ ಮುನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮತ್ತೆ ಬಿಗ್ ಹಿಟ್ಟರ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೈ ಕೊಟ್ಟರು.
ಮೊದಲ ಇನಿಂಗ್ಸ್ ನಲ್ಲಿ 6 ರನ್ ಗಳಿಸಿದ್ದ ರೋಹಿತ್ ಇಂದು 5 ರನ್ ಗಳಿಗೆ ಔಟಾದರು. ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಕೂಡಾ ಎರಡನೇ ಇನಿಂಗ್ಸ್ ನಲ್ಲಿ ವಿಫಲರಾದರು. ಅವರದ್ದು 10 ರನ್ ಗಳ ಕೊಡುಗೆ. ಬಳಿಕ ಶುಬ್ಮನ್ ಗಿಲ್ ಜೊತೆಗೂಡಿದ ವಿರಾಟ್ ಕೊಹ್ಲಿ ಭರವಸೆ ಮೂಡಿಸಿದರಾದರೂ 17 ರನ್ ಗಳಿಸುವಷ್ಟರಲ್ಲಿ ಹಸನ್ ಮಿರಾಝ್ ಗೆ ವಿಕೆಟ್ ಒಪ್ಪಿಸಿದರು.
ಇದರೊಂದಿಗೆ ಭಾರತ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಗಿಲ್ ಗೆ ಸಾಥ್ ನೀಡಿದ ರಿಷಬ್ 12 ರನ್ ಗಳಿಸಿದರು. ಶುಬ್ಮನ್ ಗಿಲ್ ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ ಅವರು 33 ರನ್ ಗಳಿಸಿದರು. ಇದರೊಂದಿಗೆ ಭಾರತದ ಒಟ್ಟು ಮುನ್ನಡೆ 308 ರನ್ ಆಗಿದೆ.