ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂದು ಬಾಂಗ್ಲಾ ತಂಡವನ್ನು ಟೀಂ ಇಂಡಿಯಾ 149 ರನ್ ಗಳಿಗೆ ಆಲೌಟ್ ಮಾಡಿದೆ. ಆ ಮೂಲಕ ಮೊದಲ ಇನಿಂಗ್ಸ್ ನಲ್ಲಿ 227 ರನ್ ಗಳ ಬೃಹತ್ ಮುನ್ನಡೆ ಗಳಿಸಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಬೇಟೆ ಆರಂಭಿಸಿದ್ದ ಜಸ್ಪ್ರೀತ್ ಬುಮ್ರಾ. ಮೊದಲ ಓವರ್ ನಲ್ಲೇ ಶದ್ಮಾನ್ ಇಸ್ಲಾಮ್ ರನ್ನು ಸುಂದರ ಯಾರ್ಕರ್ ಎಸೆತದಲ್ಲಿ ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದ್ದರು. ಆ ಬೌಲಿಂಗ್ ನೋಡಿದರೆ ಎಷ್ಟೇ ಅನುಭವಿ ಬ್ಯಾಟಿಗನಾದರೂ ಇಂಥಾ ಯಾರ್ಕರ್ ಮುಂದೆ ನಿಲ್ಲಲು ಸಾಧ್ಯವೇ ಎನಿಸಿತ್ತು.
ಇದೇ ರೀತಿ ಬುಮ್ರಾ ಟಸ್ಕಿನ್ ಅಹ್ಮದ್ ವಿಕೆಟ್ ನ್ನೂ ಯಾರ್ಕರ್ ಮೂಲಕವೇ ಉಡಾಯಿಸಿದ್ದರು. ಸತತವಾಗಿ ಬುಮ್ರಾ ಬೌಲಿಂಗ್ ನಲ್ಲಿ ಬೀಟ್ ಆಗುತ್ತಿದ್ದ ಟಸ್ಕಿನ್ ಕೊನೆಗೆ ಯಾರ್ಕರ್ ಎಸೆತಕ್ಕೇ ಕ್ಲೀನ್ ಬೌಲ್ಡ್ ಆದರು. ಈ ಎರಡೂ ಯಾರ್ಕರ್ ಎಸೆತಗಳೂ ಒಂದೇ ರೀತಿ ಇದ್ದವು.
ಈ ಇನಿಂಗ್ಸ್ ನಲ್ಲಿ ಜಸ್ಪ್ರೀತ್ ಬುಮ್ರಾ ಒಟ್ಟು 4 ವಿಕೆಟ್ ಕಬಳಿಸಿದರು. ಉಳಿದಂತೆ ಆಕಾಶ್ ದೀಪ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ತಲಾ 2 ಕಬಳಿಸಿದರು. ಆದರೆ ತವರು ನೆಲದಲ್ಲಿ ರವಿಚಂದ್ರನ್ ಅಶ್ವಿನ್ ವಿಕೆಟ್ ಲೆಸ್ ಆಗಿ ನಿರಾಸೆ ಅನುಭವಿಸಬೇಕಾಯಿತು. ಬುಮ್ರಾ ಯಾರ್ಕರ್ ಎಸೆತದ ವಿಡಿಯೋ ಇಲ್ಲಿದೆ ನೋಡಿ.