ಗ್ವಾಲಿಯರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ಬಳಿಕ ಇದೀಗ ಟಿ20 ಸರಣಿ ಆರಂಭವಾಗಲಿದೆ. ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.
ಇಂದು ಮೊದಲ ಪಂದ್ಯ ಗ್ವಾಲಿಯರ್ ನಲ್ಲಿ ನಡೆಯಲಿದೆ. ಈಗಾಗಲೇ ಟೆಸ್ಟ್ ಸರಣಿಯಲ್ಲಿ ಹಿರಿಯರು ದಿಗ್ವಿಜಯ ಸಾಧಿಸಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ಕಿರಿಯರ ಸರದಿ. ಬಾಂಗ್ಲಾದೇಶ ವಿರುದ್ಧ ಕಿರಿಯರ ಪ್ರತಿಭಾವಂತ ತಂಡವನ್ನೇ ಭಾರತ ಕಣಕ್ಕಿಳಿಸಲಿದೆ.
ಟೀಂ ಇಂಡಿಯಾದಲ್ಲಿ ನಾಯಕ ಸೂರ್ಯರಿಂದ ಹಿಡಿದು ಎಲ್ಲಾ ಆಟಗಾರರೂ ಟಿ20 ಸ್ಪೆಷಲಿಸ್ಟ್ ಗಳೇ. ಅದರಲ್ಲೂ ಇತ್ತೀಚೆಗಿನ ದಿನಗಳಲ್ಲಿ ಅಭಿಷೇಕ್ ಶರ್ಮಾರಂತಹ ಯುವ ಪ್ರತಿಭೆಗಳಿಗೂ ಮಿಂಚಿ ಭಾರತದ ಭವಿಷ್ಯ ಭದ್ರವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಬೌಲಿಂಗ್ ನಲ್ಲಿ ಟಿ20 ಸ್ಪೆಷಲಿಸ್ಟ್ ವೇಗಿ ಅರ್ಷ್ ದೀಪ್ ಸಿಂಗ್ ಇದ್ದಾರೆ. ಫಿನಿಶರ್ ಆಗಿ ರಿಂಕು ಸಿಂಗ್ ಜೊತೆಗೆ ಅನುಭವಿ ಹಾರ್ದಿಕ್ ಪಾಂಡ್ಯ ಕೂಡಾ ಇದ್ದಾರೆ. ಆದರೆ ವಿಕೆಟ್ ಕೀಪರ್ ಆಗಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದು ಕುತೂಹಲವಾಗಿದೆ. ಯಾಕೆಂದರೆ ಜಿತೇಶ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ನಡುವೆ ಪೈಪೋಟಿಯಿದೆ. ಇಬ್ಬರೂ ಟಿ20 ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಅತ್ತ ಬಾಂಗ್ಲಾದೇಶ ಕೂಡಾ ಟಿ20 ಕ್ರಿಕೆಟ್ ನಲ್ಲಿ ತೀರಾ ದುರ್ಬಲವೇನೂ ಅಲ್ಲ. ಮಹಮ್ಮದುಲ್ಲಾ, ತೌಹೀದ್ ಹೃದೊಯ್, ಲಿಟನ್ ದಾಸ್, ಮೆಹಿದಿ ಹಸನ್ ಮಿರಾಜ್ ನಂತಹ ಪ್ರತಿಭಾವಂತರಿದ್ದಾರೆ. ಆದರೆ ಭಾರತಕ್ಕೆ ತವರಿನ ಬಲವೇ ಪ್ಲಸ್ ಪಾಯಿಂಟ್. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗುತ್ತಿದ್ದು ಜಿಯೋ ಸಿನಿಮಾ ಆಪ್ ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.