ದುಬೈ: ಮಹಿಳೆಯರ ಟಿ20 ವಿಶ್ವಕಪ್ ನ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಕಿವೀಸ ಆಟಗಾರ್ತಿ ಅಮೆಲಿಯಾ ಕೆರ್ ರನೌಟ್ ವಿವಾದಕ್ಕೆ ಕಾರಣವಾಗಿದೆ. ಇದು ಔಟಾ ನಾಟೌಟಾ ಎಂದು ಚರ್ಚೆ ಶುರುವಾಗಿದೆ.
ಭಾರತದ ಬೌಲರ್ ದೀಪ್ತಿ ಶರ್ಮ ಬೌಲಿಂಗ್ ನಲ್ಲಿ ಮೊದಲು ಅಮೆಲಿಯಾ ಜೊತೆಗಾತಿ ಆಟಗಾರ್ತಿಯೊಂದಿಗೆ ಒಂಟಿ ರನ್ ಗಾಗಿ ಓಡಿದರು. ಈ ವೇಳೆ ಬಾಲ್ ಓವರ್ ಥ್ರೋ ಆಗಿರುವುದನ್ನು ಗಮನಿಸದೇ ಅಂಪಾಯರ್ ಕ್ಯಾಪ್ ನ್ನು ಬೌಲರ್ ದೀಪ್ತಿಗೆ ನೀಡಿದ್ದರು. ಆದರೆ ಈ ನಡುವೆ ಅಮೆಲಿಯಾ ಮತ್ತೊಂದು ರನ್ ಗಾಗಿ ಓಡುತ್ತಿರುವುದು ಗಮನಿಸಿ ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ರನೌಟ್ ಮಾಡಲು ವಿಕೆಟ್ ನತ್ತ ಚೆಂಡು ಎಸೆದರು. ಈ ವೇಳೆ ಅಮೆಲಿಯಾ ಕ್ರೀಸ್ ಗೆ ತಲುಪಲಿಲ್ಲ. ಭಾರತೀಯರು ವಿಕೆಟ್ ಬಿತ್ತು ಎಂದು ಸಂಭ್ರಮಪಡುತ್ತಿದ್ದರು.
ಆದರೆ ಅಂಪಾಯರ್ ರನೌಟ್ ನೀಡಲಿಲ್ಲ. ಇದು ಭಾರತೀಯ ಆಟಗಾರ್ತಿಯರು ಮತ್ತು ಕೋಚ್ ಸಿಟ್ಟಿಗೆ ಕಾರಣವಾಯಿತು. ನೇರವಾಗಿ ಅಂಪಾಯರ್ ಗಳ ಬಳಿ ವಾಗ್ವಾದಕ್ಕಿಳಿದಿದ್ದರು. ನಾನು ಬೌಲರ್ ಗೆ ಕ್ಯಾಪ್ ಕೊಟ್ಟಿದ್ದರಿಂದ ಅದು ಡೆಡ್ ಬಾಲ್ ಎಂದು ಪರಿಗಣಿತವಾಗುತ್ತದೆ. ಹೀಗಾಗಿ ರನೌಟ್ ಕೊಡಲು ಸಾಧ್ಯವಿಲ್ಲ ಎಂದು ಅಂಪಾಯರ್ ವಾದಿಸಿದ್ದಾರೆ. ಕೊನೆಗೆ ಅಸಮಾಧಾನದಿಂದಲೇ ಭಾರತೀಯ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನಾ ಫೀಲ್ಡಿಗೆ ಮರಳಿದರು. ಆದರೆ ಹೆಚ್ಚು ಸಮಯ ಅಮೆಲಿಯಾ ಕೆರ್ ಕ್ರೀಸ್ ನಲ್ಲಿರಲಿಲ್ಲ. ಮುಂದೆ ಎರಡೇ ಬಾಲ್ ಅಂತರದಲ್ಲಿ ರೇಣುಕಾ ಸಿಂಗ್ ಗೆ ವಿಕೆಟ್ ಒಪ್ಪಿಸಿ ನಡೆದರು. ಆ ವಿವಾದಾತ್ಮಕ ರನೌಟ್ ವಿಡಿಯೋ ಇಲ್ಲಿದೆ ನೋಡಿ.