ನವದೆಹಲಿ: ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬೇರೆ ಬೇರೆ ಪಕ್ಷಗಳ ನಾಯಕರು ರಾಜಕೀಯದ ಹೊರತಾಗಿ ಸ್ನೇಹದಿಂದ ಇರುವುದೇ ಇಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ವಿಚಾರದಲ್ಲಿ ಅದು ಸುಳ್ಳು ಎಂದು ಸಾಬೀತಾಗಿದೆ.
ನಿನ್ನೆ ವಾಜಪೇಯಿ ಗಂಭೀರ ಎಂಬ ಸುದ್ದಿ ತಿಳಿದಾಗಿನಿಂದ ಬಿಜೆಪಿಯೇತರ ರಾಜಕೀಯ ಪಕ್ಷಗಳ ನಾಯಕರೂ ತಮ್ಮ ವಿರೋಧಿ ಪಕ್ಷದ ನಾಯಕ ಎಂಬುದನ್ನೂ ಮರೆತು ವಾಜಪೇಯಿಗಾಗಿ ಪ್ರಾರ್ಥನೆ ಮಾಡಿದರು. ಅವರನ್ನು ಖುದ್ದಾಗಿ ಭೇಟಿ ಮಾಡಲು ಏಮ್ಸ್ ಗೆ ದೌಡಾಯಿಸಿದರು.
ಇದು ವಾಜಪೇಯಿ ಅಜಾತಶತ್ರು ಎನಿಸಿಕೊಂಡಿದ್ದು ಯಾವ ಕಾರಣಕ್ಕೆ ಎಂದು ಸಾಬೀತುಪಡಿಸಿತು. ನಿನ್ನೆ ಬೆಳಿಗ್ಗೆಯೇ ಕಾಂಗ್ರೆಸ್ ತನ್ನ ಟ್ವಿಟರ್ ನಲ್ಲಿ ವಾಜಪೇಯಿ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಟ್ವೀಟ್ ಮಾಡಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿದರು. ದೆಹಲಿ ಸಿಎಂ, ಎಎಪಿ ಮುಖಂಡ ಬಿಜೆಪಿಗೆ ಯಾವತ್ತೂ ಹಿಡಿ ಶಾಪ ಹಾಕುತ್ತಿದ್ದರೂ ಅದೇ ಪಕ್ಷದ ಹಿರಿಯ ಮುಖಂಡನ ಅನಾರೋಗ್ಯ ಸುದ್ದಿ ತಿಳಿದಂತೆ ತಮ್ಮ ಹುಟ್ಟು ಹಬ್ಬ ಆಚರಣೆಯನ್ನೂ ರದ್ದುಗೊಳಿಸಿ ಆಸ್ಪತ್ರೆಗೆ ಭೇಟಿ ನೀಡಿದರು.
ಅಷ್ಟೇ ಅಲ್ಲ, ಸದ್ಯದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದೇ ತಮ್ಮ ಗುರಿ ಎನ್ನುವ ಮಮತಾ ಬ್ಯಾನರ್ಜಿ ಕೂಡಾ ವಾಜಪೇಯಿ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆಯೂ ವೈಯಕ್ತಿಕವಾಗಿ ಯಾರಿಗೂ ನೋವುಂಟು ಮಾಡದ, ಘನತೆಗೆ ಕುತ್ತು ತರುವಂತೆ ನಡೆದುಕೊಳ್ಳದ ಸರಳ ಸಜ್ಜನ ರಾಜಕಾರಣಿ ಬಗ್ಗೆ ಪಕ್ಷ ಬೇಧ ಮರೆತು ರಾಜಕೀಯ ನಾಯಕರು ಕಾಳಜಿ ತೋರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.