ಮಾರುಕಟ್ಟೆ ಏರುಗತಿಯಲ್ಲಿದ್ದರೆ ಅದು ಧನಾತ್ಮಕ ಅಂಶ. ಮಾರುಕಟ್ಟೆ ಕುಸಿತ ಕಾಣುತ್ತಿದ್ದರೆ ಅದು ಋಣಾತ್ಮಕ ಅಂಶ. ಮಾರುಕಟ್ಟೆಯಲ್ಲಿ ಇಂದಿಗೆ ಬಹುತೇಕರು ಒಳ್ಳೆಯ ಫಸಲನ್ನ ತೆಗೆಯುತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಇದೇನಿದು ಷೇರು ಪೇಟೆ ಏರುಗತಿಯಲ್ಲಿರುವಾಗ ನಾವೇಕೆ ಹೆಚ್ಚು ಜಾಗೃತರಾಗಿರಬೇಕು? ಎನ್ನುವ ಪ್ರಶ್ನೆ ಸಹಜವಾಗೇ ನಿಮ್ಮ ಮನಸಿನಲ್ಲಿ ಮೂಡಿರುತ್ತದೆ.
ಹೌದು ಇದು ಸಹಜ. ಆದರೆ ಗಮನಿಸಿ ನೋಡಿ ಕುಸಿತದ ಸಮಯದಲ್ಲಿ ಎಲ್ಲರೂ ಅಳೆದು ತೂಗಿ ಹಣವನ್ನ ಹೂಡಿಕೆ ಮಾಡುತ್ತಾರೆ. ಅದೇ ಏರುಗತಿಯಲ್ಲಿ ಹೆಚ್ಚು ಚಿಂತಿಸುವುದಿಲ್ಲ, ಅವರು ಮಾರುಕಟ್ಟೆಯ ತೇಲುವಿಕೆ ಜೊತೆಗೆ ಹೊರಟು ಬಿಡುತ್ತಾರೆ. ಮೊದಲೇ ಹೇಳಿದಂತೆ ಮನಸ್ಸಿನಲ್ಲಿ ಇರುವ ಪಾಸಿಟಿವ್ ಸೆಂಟಿಮೆಂಟಿನ ಪ್ರಭಾವವದು.
ಈ ಹಿಂದೆ ಹಣಕ್ಲಾಸು ಅಂಕಣದಲ್ಲಿ ಐಪಿಒ ಗಳು ಈ ವರ್ಷ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇಂತಹ ಐಪಿಒ ಗಳಲ್ಲಿ ಬಹಳಷ್ಟು ಮಾಹಿತಿಗಳು ಇರುವುದಿಲ್ಲ ಎನ್ನುವುದರ ಬಗ್ಗೆ ಕೂಡ ಬರೆಯಲಾಗಿತ್ತು. ಪ್ರಾಥಮಿಕ ಮಾರುಕಟ್ಟೆಯಲ್ಲಿ ಇರುವ ದೊಡ್ಡ ಕೊರತೆಯೆಂದರೆ ಮಾಹಿತಿಯನ್ನ ಕಲೆ ಹಾಕುವುದು. ಇದೆ ತಿಂಗಳು ಅಂದರೆ ಸೆಪ್ಟೆಂಬರ್ 2021 ರಂದು ಮಾರುಕಟ್ಟೆಗೆ 9 ಸಂಸ್ಥೆಗಳು ತಮ್ಮ ಐಪಿಒದೊಂದಿಗೆ ಮಾರ್ಕಟ್ಟೆಗೆ ಲಗ್ಗೆಯನ್ನ ಇಡಲಿವೆ. ಹೀಗೆ ಒಟ್ಟು 9 ಸಂಸ್ಥೆಗಳ ಮೂಲಕ ಮಾರುಕಟ್ಟೆಯಿಂದ ಹನ್ನೆರಡು ಸಾವಿರದ ಐನೂರು ಕೋಟಿ ರೂಪಾಯಿಯನ್ನ ತೆಗೆದುಕೊಳ್ಳುವ ಹವಣಿಕೆಯಲ್ಲಿವೆ. ರುಚಿ ಸೋಯಾ, ಆದಿತ್ಯ ಬಿರ್ಲಾ ಸನ್ ಲೈಫ್. ವಿಜಯ ಡೈಗೊನಿಸ್ಟಿಕ್, ಪೆನ್ನಾ ಸಿಮೆಂಟ್ ಹೀಗೆ ಇನ್ನು ಹಲವಾರು ಸಂಸ್ಥೆಗಳು ಪ್ರೈಮರಿ ಮಾರುಕಟ್ಟೆಗೆ ಬರಲಿವೆ.
ಗಮನಿಸಿ ನೋಡಿ, ಈ ಸಂಸ್ಥೆಗಳ ಷೇರನ್ನ ಕೊಳ್ಳಬಾರದು ಅಥವಾ ಕೊಳ್ಳಬಹುದು ಎನ್ನುವುದನ್ನ ಇಲ್ಲಿ ಹೇಳುತ್ತಿಲ್ಲ. ಇಂದಿನ ದಿನದಲ್ಲಿ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಾ ಹೋಗುತ್ತಿದೆ. ಸಾಮಾನ್ಯವಾಗೇ ಎಲ್ಲಾ ಹೂಡಿಕೆದಾರರಲ್ಲಿ ಹಣವನ್ನ ಹಾಕಿ ಹೆಚ್ಚಿನ ಹಣವನ್ನ ಬಾಚಿಕೊಳ್ಳುವ ಆತುರ ಕೂಡ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಎಚ್ಚರ ತಪ್ಪುವ ಸಾಧ್ಯತೆ ಬಹಳ ಹೆಚ್ಚು. ಹೀಗಾಗಿ ಹೆಚ್ಚಿನ ಜಾಗ್ರತೆ, ಪರಿಶೀಲನೆ ಅಗತ್ಯವಿರುತ್ತದೆ. ಇನ್ನೊಂದು ಅಂಶವನ್ನ ಕೂಡ ನೀವು ಗಮನಿಸಿ ನೋಡಿ ವರ್ಷದಲ್ಲಿ ಆಗುತ್ತಿದ್ದ ಬದಲಾವಣೆ ಕೇವಲ 19 ದಿನಗಳಲ್ಲಿ ಆಗಿದೆ. ಅಂದರೆ ಸಾಮಾನ್ಯವಾಗಿ ನಿಫ್ಟಿ ಒಂದು ಸಾವಿರ ಅಂಕ ಮೇಲೇರಲು ವರ್ಷ ಹಿಡಿಯುತಿತ್ತು. ಈ ಬಾರಿ ನಿಫ್ಟಿ 16 ಸಾವಿರದಿಂದ 17 ಸಾವಿರಕ್ಕೆ ಕೇವಲ 19 ದಿನದಲ್ಲಿ ಜಿಗಿತ ಕಂಡಿದೆ. ಅಲ್ಲದೆ ಡಿಸೆಂಬರ್ 2021 ರ ಅಂತ್ಯದ ವೇಳೆಗೆ ಈ ಸಂಖ್ಯೆ 18500 ದಾಟುತ್ತದೆ ಎನ್ನುವ ಊಹಾಪೋಹ, ಲೆಕ್ಕಾಚಾರದ ಗುಸುಗುಸು ಕೂಡ ಆಗಲೇ ಎಲ್ಲಡೆ ಹಬ್ಬಿದೆ.
ಒಂದೆಡೆ ಜಾಗತಿಕ ವಿತ್ತ ಜಗತ್ತು ಇನ್ನೂ ಕೋವಿಡ್ ಆಘಾತದಿಂದ ಚೇತರಿಸಿಕೊಂಡಿಲ್ಲ ಎನ್ನುವ ಮಾತುಗಳನ್ನ ಕೇಳುತ್ತಿದ್ದೇವೆ, ಇನ್ನೊಂದೆಡೆ ನಾಗಾಲೋಟದಲ್ಲಿ ಓಡುತ್ತಿರುವ ಷೇರು ಮಾರುಕಟ್ಟೆಯನ್ನ ತೋರಿಸಿ ಎಲ್ಲವೂ ಸರಿಯಾಗಿದೆ ಎನ್ನುವ ಕೂಗನ್ನ ಕೂಡ ಕೇಳುತ್ತಿದ್ದೇವೆ. ನಿಮಗೆಲ್ಲಾ ಒಂದು ವಿಷಯ ಗೊತ್ತಿರಲಿ ಷೇರು ಮಾರುಕಟ್ಟೆಯ ಏರಿಳಿತಗಳು ಏನೇ ಇರಲಿ ಅದು ನಮ್ಮ ಸಮಾಜದ ಅದರಲ್ಲೂ ವಿತ್ತ ಭದ್ರತೆಯ ಅಥವಾ ದೇಶದ ವಿತ್ತೀಯ ಆರೋಗ್ಯದ ಮಾಪಕವಲ್ಲ. ನಮ್ಮ ಷೇರು ಮಾರುಕಟ್ಟೆ ಇಷ್ಟೊಂದು ವೇಗವಾಗಿ ಸಂಪತ್ತು ಸೃಷ್ಟಿಸಿ ಕೊಡುತ್ತಿರುವ ಈ ಸಮಯದಲ್ಲಿ ಇದೇನಿದು ಎನ್ನುವ ಭಾವನೆ ನಿಮಗೆ ಬಂದಿರುತ್ತದೆ. ಅದೇಕೆ ಷೇರುಮಾರುಕಟ್ಟೆಯ ಗೂಳಿ ಓಟ ನಮ್ಮ ಸಮಾಜದ ಒಟ್ಟು ಆರ್ಥಿಕ ಸ್ಥಿರತೆಯ ಮಾಪಕವಲ್ಲ ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನ ನೀಡಬಹುದು. ಅವುಗಳಲ್ಲಿ ಪ್ರಮುಖವಾದವುಗಳನ್ನ ಹೀಗೆ ಪಟ್ಟಿ ಮಾಡಬಹುದು.