ನವದೆಹಲಿ, ಸೆ 4: ದೇಶದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ 7ರವರೆಗೆ ಹವಾಮಾನ ವರದಿಯನ್ನು ಇಲಾಖೆ ಬಿಡುಗಡೆಗೊಳಿಸಿದ್ದು, ಈ ಮುಂದಿನ ಮೂರು ದಿನಗಳ ಕಾಲ ಕೆಲವು ರಾಜ್ಯಗಳು ಅಧಿಕ ಮಟ್ಟದ ಮಳೆ ಪಡೆಯಲಿರುವುದಾಗಿ ತಿಳಿಸಿದೆ. ಪಂಜಾಬ್, ಹರಿಯಾಣ, ನೈಋತ್ಯ ರಾಜಸ್ತಾನ ಹಾಗೂ ಹಿಮಾಚಲ ಪ್ರದೇಶದಲ್ಲಿ ಶನಿವಾರ ಹಾಗೂ ಭಾನುವಾರ ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದಲೂ ಭಾರೀ ಮಳೆಯಾಗುತ್ತಿದ್ದು, ಶನಿವಾರ ಕೂಡ ಮಳೆ ಮುಂದುವರೆಯುವ ಸೂಚನೆ ನೀಡಲಾಗಿದೆ. ಮಂಗಳವಾರದಿಂದ ದೆಹಲಿಯಲ್ಲಿ ಅಧಿಕ ಮಟ್ಟದ ಮಳೆಯಾಗುತ್ತಿದೆ. ಹತ್ತೊಂಬತ್ತು ವರ್ಷದ ನಂತರ ಸೆಪ್ಟೆಂಬರ್ ತಿಂಗಳಿನಲ್ಲಿ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದಾಗಿದೆ. ದೆಹಲಿಯ ಹಲವು ನಗರಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಸೆಪ್ಟೆಂಬರ್ 6ರ ನಂತರ ಮತ್ತೆ ದೆಹಲಿಯಲ್ಲಿ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 7ರ ನಂತರ ಹಿಮಾಚಲದಲ್ಲಿ ಮಳೆ ಆರಂಭವಾಗಲಿದೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸೆಪ್ಟೆಂಬರ್ 6 ಹಾಗೂ 7ರಂದು ಅಧಿಕ ಮಳೆಯಾಗಲಿದೆ. ಉತ್ತರಾಖಂಡ, ಹರಿಯಾಣದಲ್ಲಿ ಕೂಡ ಸೆಪ್ಟೆಂಬರ್ 7ರಂದು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ಸೆಪ್ಟೆಂಬರ್ 20ರವರೆಗೂ ಮಳೆ ಮುಂದುವರೆಯುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಹಿಮಾಚಲಯ ಪ್ರದೇಶದ ಶಿಮ್ಲಾ, ಹಮೀರ್ಪುರ, ಸೋಲನ್, ಉನಾ ಹಾಗೂ ಸಿರ್ಮೌರ್ನಲ್ಲಿ ಅಧಿಕ ಮಳೆಯಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಆನಂತರ ಮುಂಗಾರು ಕ್ಷೀಣಿಸುವುದಾಗಿ ತಿಳಿಸಿದೆ. ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ರವಾನಿಸಲಾಗಿದೆ.
ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಕರಾವಳಿ ತೀರಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯುವುದಾಗಿ ತಿಳಿಸಲಾಗಿದೆ. ಕೊಂಕಣ, ಗೋವಾದಲ್ಲಿ, ಮಧ್ಯ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 7ರಂದು ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ ಮಳೆ: ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿ, ಮಲೆನಾಡಿನಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಸನ, ಕೊಡಗು, ರಾಮನಗರ, ತುಮಕೂರು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 5 ಹಾಗೂ 6ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಳೆ ಸಾಧ್ಯತೆ
ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ದಾಖಲಾಗಿತ್ತು. ಎರಡು ತಿಂಗಳಿನಲ್ಲಿ ಬಿಟ್ಟು ಬಿಟ್ಟು ಮಳೆಯಾಗಿ ದೀರ್ಘಕಾಲ ಬಿಡುವನ್ನೂ ಪಡೆದುಕೊಂಡಿತ್ತು. ಇದೀಗ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಮುಂಗಾರಿನ ಕೊನೆಯ ತಿಂಗಳಾದ ಸೆಪ್ಟೆಂಬರ್ನಲ್ಲಿ ಹೆಚ್ಚಿನ ಮಳೆ ದಾಖಲಾಗಬಹುದು. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ದಾಖಲಾಗಬಹುದು ಎಂದು ತಿಳಿಸಿದೆ.