ಬೆಂಗಳೂರು : ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆ ಕೊರೊನಾ ನಿಯಮಗಳನ್ನು ಕೂಡ ಕೊಂಚ ಬಿಗಿಗೊಳಿಸಲಾಗಿದೆ. ದಸರಾ ಹಬ್ಬ ಮುಗಿದ ಬಳಿಕ ಕರ್ನಾಟಕದ ಗಡಿ ಭಾಗಗಳಲ್ಲಿ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದಸರಾ ಹಬ್ಬದ ಬಳಿಕ ಕೇರಳ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಹೇರಿರುವ ಕೋವಿಡ್ ನಿಯಮವನ್ನು ಸಡಿಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಈ ಬಗ್ಗೆ ರಾಜ್ಯದ ಕೊವಿಡ್ ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು. ಗಡಿ ರಾಜ್ಯಗಳಲ್ಲಿ ಕೊರೊನಾ ಕೇಸುಗಳ ಪ್ರಮಾಣ ಹೇಗಿದೆ ಎಂಬ ಬಗ್ಗೆ ಗಮನ ಹರಿಸಿದ್ದೇವೆ. ಅದನ್ನು ಪರಿಗಣಿಸಿ ಸದ್ಯದಲ್ಲೇ ಕೊವಿಡ್ ನಿಯಮಗಳ ಸಡಿಲಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಕೇಸುಗಳು ಹೆಚ್ಚಾಗಿರುವುದರಿಂದ ಕರ್ನಾಟಕದ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಸದ್ಯದಲ್ಲೇ ಆ ನಿಯಮವನ್ನು ಸಡಿಲಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ -19 ಪಾಸಿಟಿವ್ ಕೇಸುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕೋವಿಡ್ ಪಾಸಿಟಿವ್ ಸ್ಥಿತಿಗತಿ, ಲಸಿಕೆ ಹಾಕಿರುವ ಪ್ರಮಾಣದ ಬಗ್ಗೆ ಪರಾಮರ್ಶಿಸಿ ರಾಜ್ಯದ ಗಡಿಯಲ್ಲಿ ಹೇರಿರುವ ಕಟ್ಟುನಿಟ್ಟಿನ ನಿಯಮವನ್ನು ಸಡಿಲಿಕೆ ಮಾಡುವ ಬಗ್ಗೆ ದಸರಾ ಬಳಿಕ ನಡೆಯುವ ತಜ್ಞರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.