ಬೆಂಗಳೂರು : ನಗರದಲ್ಲಿ ಇಂದು (ಡಿಸೆಂಬರ್ 31) ಸಂಜೆ 6 ಗಂಟೆಯಿಂದ ನಾಳೆ (ಜನವರಿ 1) ಬೆಳಗ್ಗೆ 5 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಡಿಸೆಂಬರ್ 31ರ ಸಂಜೆ 6 ರಿಂದ ಜನವರಿ 1ರ ಮುಂಜಾನೆ 5 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ 5 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ತಿಳಿಸಲಾಗಿದೆ.
ಬೆಂಗಳೂರು ನಗರದಲ್ಲಿ ಇಂದು ಸಂಜೆ 6 ಗಂಟೆಯಿಂದ ನಿರ್ಬಂಧವಿದೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಹೆಚ್ಚು ಜನರ ಸೇರಬಾರದು. ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ವಿಧಾನಸೌಧದಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಕೊರೊನಾ ಸ್ಫೋಟವಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ನಿರ್ಬಂಧ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ನಿರ್ಬಂಧ ಹಾಕಲಾಗಿದೆ. ಜನರು ತಮ್ಮ ಮನೆಗಳಲ್ಲೇ ಹೊಸವರ್ಷಾಚರಣೆ ಮಾಡಬೇಕು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹೋಟೆಲ್, ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಆರ್ಥಿಕ ನಷ್ಟ ವಿಚಾರವಾಗಿ ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಬಂಧಗಳನ್ನ ಹಾಕಲು ನಮಗೆ ಸಂತೋಷವಿಲ್ಲ, ನಮಗೆ ನೋವಿದೆ.
ಹೋಟೆಲ್ ಪಬ್ ಅವರವರ ವ್ಯಾಪರ ಮಾಡ್ತಿದ್ದಾರೆ. ಆದ್ರೆ ಸದ್ಯ ಬದುಕು ಮುಖ್ಯ. ನಾವು ಈಗಾಗಲೇ ಸ್ಮಶಾನದಲ್ಲಿ ಆ್ಯಂಬುಲೆನ್ಸ್ಗಳು ಕ್ಯೂ ನಿಂತಿದ್ದನ್ನ ನೋಡಿದ್ದೇವೆ. ಮಾಧ್ಯಮಗಳಲ್ಲಿ ಅದನ್ನು ನೋಡುವಾಗ ತುಂಬಾ ನೋವಾಗಿದೆ. ಅದು ಆಗಬಾರದು ಅಂತಾ ನಾವೂ ಈ ರೀತಿ ನಿರ್ಬಂಧ ಮಾಡುತ್ತೇವೆ.