Photo Courtesy: Instagram
ಬೆಂಗಳೂರು: ಸೀತಾ ರಾಮ ಧಾರವಾಹಿಯ ದೃಶ್ಯವೊಂದರಲ್ಲಿ ಹೆಲ್ಮೆಟ್ ಇಲ್ಲದೇ ಹಿಂಬದಿ ಸವಾರಿ ಮಾಡಿದ್ದಕ್ಕೆ ನಾಯಕಿ ಸೀತಾ ಅಲಿಯಾಸ್ ನಟಿ ವೈಷ್ಣವಿ ಗೌಡಗೆ ಸಂಚಾರಿ ಪೊಲೀಸರು 500 ರೂ. ದಂಡ ಹಾಕಿದ್ದು ಈಗ ನೆಟ್ಟಿಗರ ಟೀಕೆಗೆ ಗುರಿಯಾಗಿದೆ.
ಸೀತಾರಾಮ ಒಂದು ಧಾರವಾಹಿ. ಈ ಧಾರವಾಹಿಯ ದೃಶ್ಯವೊಂದರಲ್ಲಿ ಹೆಲ್ಮೆಟ್ ಹಾಕಲಿಲ್ಲ ಎಂದು ವೈಷ್ಣವಿಗೆ ದಂಡ ಹಾಕಲಾಗಿದೆ. ನಿರ್ದೇಶಕರು ಏನು ಹೇಳುತ್ತಾರೋ ಅದರಂತೆ ಅಭಿನಯಿಸುವುದು ಕಲಾವಿದರ ಕರ್ತವ್ಯವಾಗಿರುತ್ತದೆ. ಆದರೆ ಇದೇ ವಿಚಾರಕ್ಕೆ ಯಾರೋ ಪ್ರೇಕ್ಷಕರು ದೂರು ಕೊಟ್ಟರು ಎಂದು ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿ ದಂಡ ಹಾಕಿರುವ ಘಟನೆ ನಡೆದಿರುವುದು ಇದೇ ಮೊದಲು.
ಹೀಗಾಗಿ ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅದು ಕೇವಲ ಧಾರವಾಹಿ, ರಿಯಲ್ ಅಲ್ಲ. ತೆರೆ ಮೇಲೆ ಬಂದಿರುವ ದೃಶ್ಯಗಳನ್ನೆಲ್ಲಾ ಅಪರಾಧ ಎಂದು ಹೇಳುವುದಾದರೆ ಎಷ್ಟೆಲ್ಲಾ ಕೇಸ್ ಹಾಕಬಹುದು. ನಾಳೆ ತೆರೆ ಮೇಲೆ ರೇಪ್, ಮರ್ಡರ್ ಮಾಡಿದ್ದಕ್ಕೆಲ್ಲಾ ಕೇಸ್ ಹಾಕ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು ಎಷ್ಟೋ ದೊಡ್ಡ ದೊಡ್ಡ ಕಲಾವಿದರೂ ತೆರೆ ಮೇಲೆ ಹೆಲ್ಮೆಟ್ ಹಾಕದೇ ಓಡಾಡುವ, ಸ್ಟಂಟ್ ಮಾಡುವ ದೃಶ್ಯ ತೋರಿಸುತ್ತಾರೆ. ಎಷ್ಟೋ ರಾಜಕಾರಣಿಗಳ ರೋಡ್ ಶೋನಲ್ಲಿ ಕಾರ್ಯಕರ್ತರು ಹೆಲ್ಮೆಟ್ ಹಾಕದೇ ಬೈಕ್ ರಾಲಿ ಮಾಡ್ತಾರೆ. ಹಾಗಿದ್ದರೆ ಇಂತಹವರ ಮೇಲೂ ಕೇಸ್ ಹಾಕ್ತೀರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.