ಮುಂಬೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪವಿರುವ ಶ್ರೀಶಾಂತ್ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ಸ್ ರಾಹುಲ್ ದ್ರಾವಿಡ್ ಹಾಗೂ ಎಂ.ಎಸ್.ಧೋನಿ ವಿರುದ್ಧ ಹರಿಹಾಯ್ದಿದ್ದಾರೆ.
ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ನನಗೆ ಅಗತ್ಯವಿದ್ದಾಗ ಅವರಿಂದ ನೆರವು ಸಿಗಲಿಲ್ಲ. ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿದ್ದ ರಾಹುಲ್ ದ್ರಾವಿಡ್ ಗೆ ನನ್ನ ಪರ ನಿಲ್ಲುವಂತೆ ಮನವಿ ಮಾಡಿಕೊಂಡರೂ ಅವರು ಸಹಾಯ ಮಾಡಲಿಲ್ಲ. ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದ ಧೋನಿಯವರಿಗೆ ಭಾವನಾತ್ಮಕ ಸಂದೇಶ ರವಾನೆ ಮಾಡಿದ್ರೂ ಯಾವುದೇ ಉತ್ತರ ಸಿಗಲಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.
ಫಿಕ್ಸಿಂಗ್ ವೇಳೆ ಟೀಂ ಇಂಡಿಯಾದ ಟಾಪ್ 10ರಲ್ಲಿದ್ದ ಆರು ಕ್ರಿಕೆಟರ್ಸ್ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಆದರೆ ಭಾರತೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರುವ ಕಾರಣ ಆಟಗಾರರ ಹೆಸರನ್ನು ಬಹಿರಂಗಗೊಳಿಸದಂತೆ ಬಿಸಿಸಿಐ ಮನವಿ ಮಾಡಿಕೊಂಡಿತ್ತು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೇ. ನನ್ನ ವಿರುದ್ಧ ಕ್ರಮಕ್ಕೆ ಮುಂದಾದ ಬಿಸಿಸಿಐ, ಅವರ ಬೆನ್ನಿಗೆ ನಿಂತಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ.