ಸಿಹಿ ತಿಂಡಿ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಅಂತಹ ಸಿಹಿ ಸಿಹಿಯಾದ ರುಚಿಯಾದ ತಿಂಡಿಗಳ ಪಟ್ಟಿಗೆ ರಸ್ಮಲಾಯಿ ಕೂಡಾ ಸೇರುತ್ತದೆ. ಹಾಗಾದರೆ ಇದನ್ನು ಮಾಡುವುದು ಹೇಗೆ ಎಂದು ನೋಡೋಣ..
ಸಾಮಗ್ರಿಗಳು:
ಬಾಸುಂದಿಗೆ (ರಸ)
ಹಾಲು 1.5 ಲೀಟರ್
ಸಕ್ಕರೆ 1/2 ಕೆಜಿ
ಪಿಸ್ತಾ ಮತ್ತು ಬಾದಾಮ್ ಚೂರುಗಳು 1/4 ಕಪ್
ರಸಗುಲ್ಲಾ (ಪನೀರ್ ಉಂಡೆ) ಗೆ
ಹಾಲು 2 ಲೀಟರ್
ವಿನೆಗರ್ 1.5 ಚಮಚ (ನಿಂಬೆ ರಸ ಕೂಡಾ ಬಳಸಬಹುದು 2 ರಿಂದ 4 ಚಮಚ)
ಸಕ್ಕರೆ 1 ಕಪ್
ನೀರು 3 ಕಪ್
ಮಾಡುವ ವಿಧಾನ:
ಮೊದಲು 2 ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ ಆ ಹಾಲು ಪೂರ್ತಿಯಾಗಿ ಒಡೆಯುವ ತನಕ ವಿನೆಗರ್ ಅನ್ನು ಹಾಕಿ ಚೆನ್ನಾಗಿ ಕಲುಕಬೇಕು. (ವಿನೆಗರ್ ಬದಲು ನಿಂಬೆ ರಸ ಬಳಸಬಹುದು) ಈಗ 1 ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಜರಡಿ ಇಟ್ಟು ಅದರ ಮೇಲೆ ತೆಳ್ಳನೆಯ ಹತ್ತಿ ಬಟ್ಟೆಯನ್ನು ಹಾಕಿ ಒಡೆದ ಹಾಲನ್ನು ಬಟ್ಟೆಯ ಮೇಲೆ ಹಾಕಿ ಮೇಲಿನಿಂದ ನೀರನ್ನು ಹಾಕುತ್ತಾ ಚಮಚದಿಂದ ಕಲುಕುತ್ತಾ ಇರಬೇಕು. ಹಾಲಿಗೆ ಹುಳಿ ಹಾಕಿದ್ದರಿಂದ ನೀರನ್ನು ಹಾಕಿ ಹುಳಿಯ ಅಂಶವನ್ನು ತೆಗೆಯಬೇಕು. ನಂತರ ಬಟ್ಟೆಯ ಗಂಟು ಕಟ್ಟಿ ಅದರ ಮೇಲೆ ಏನಾದರೂ ಭಾರ ಹೇರಿಟ್ಟು ಸ್ವಲ್ಪ ಹೊತ್ತು ಬಿಡಬೇಕು. ನೀರಿನಂಶ ಪೂರ್ತಿಯಾಗಿ ಇಳಿದು ಬರಿಯ ಪನೀರಿ ಉಳಿದ ಮೇಲೆ ಅದನ್ನು 1 ಪಾತ್ರೆಗೆ ಹಾಕಿ ಚೆನ್ನಾಗಿ ನಾದಬೇಕು. ನಂತರ ಇದನ್ನು ಸ್ವಲ್ಪ ದೊಡ್ಡ ಗಾತ್ರದ ಉಂಡೆ ಮಾಡಿ ಅದನ್ನು ತಟ್ಟಿ ಚಪ್ಪಟೆ ಮಾಡಿ ಇಟ್ಟುಕೊಳ್ಳಬೇಕು. ನಂತರ 1.5 ಲೀಟರ್ ಹಾಲಿಗೆ 1/2 ಕೆಜಿಯಷ್ಟು ಸಕ್ಕರೆ ಹಾಕಿ ಹಾಲು ಸುಮಾರು ಅರ್ಧದಷ್ಚು ಕಮ್ಮಿ ಆಗುವವರೆಗೆ ಕುದಿಸಬೇಕು. ನಂತರ ಉರಿ ಆರಿಸಿ ಕೇಸರಿ ಹಾಲನ್ನು ಹಾಕಿ ತಣ್ಣಗಾಗಲು ಬಿಡಬೇಕು. ಇತ್ತ 1 ಕಪ್ ಸಕ್ಕರೆಗೆ 3 ಕಪ್‌ನಷ್ಟು ನೀರು ಹಾಕಿ ಕುದಿಸಿ ಮಾಡಿಟ್ಟುಕೊಂಡ ಪನೀರ್ ಉಂಡೆಯನ್ನು ಹಾಕಿ 8 ರಿಂದ 10 ನಿಮಿಷ ಕುದಿಸಬೇಕು.
ಉಂಡೆಯ ಗಾತ್ರ ದೊಡ್ಡದಾಗುತ್ತಿದ್ದಂತೆ ಉರಿ ಆರಿಸಿ ಉಂಡೆಗಳನ್ನು ಪಾಕದಿಂದ ತೆಗೆದು ಬಿಸಿ ಅರಿದ ಒಂದೊಂದೇ ಉಂಡೆ ತೆಗೆದುಕೊಂಡು ಕೈ ಇಂದ ಒತ್ತಿ ಸಕ್ಕರೆ ನೀರು ತೆಗೆದು ಇಟ್ಟುಕೊಳ್ಳಬೇಕು. ನಂತರ ತಣ್ಣಗಾದ ಹಾಲಿನ ಮಿಶ್ರಣಕ್ಕೆ ಮಾಡಿಟ್ಟ ಉಂಡೆಗಳನ್ನು ಹಾಕಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಬಾದಾಮ್ ಮತ್ತು ಪಿಸ್ತಾ ಚೂರುಗಳನ್ನು ಹಾಕಿ 1 ರಿಂದ 2 ಗಂಟೆ ಫ್ರಿಡ್ಜ್‌ನಲ್ಲಿ ಇಟ್ಟರೆ ತಣ್ಣನೆಯ ಸವಿಯಾದ ರಸ್ಮಲಾಯಿ ಸವಿಯಲು ಸಿದ್ಧ.