Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಳಿದಿರೋ ಅನ್ನದಿಂದ ಏನೆಲ್ಲಾ ಮಾಡ್ಬಹುದು ಗೊತ್ತಾ...!?

ಉಳಿದಿರೋ ಅನ್ನದಿಂದ ಏನೆಲ್ಲಾ ಮಾಡ್ಬಹುದು ಗೊತ್ತಾ...!?

ನಾಗಶ್ರೀ ಭಟ್

ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (14:11 IST)
ಗೃಹಿಣಿಯರಿಗೆ ಮಾಡಿರೋ ಅಡುಗೆ ಹೆಚ್ಚಾಗಿ ಹಾಳಾದ್ರೆ ಬೇಜಾರು. ಅದನ್ನಾ ಏನು ಮಾಡೋದು ಅನ್ನೋ ತಲೆನೋವು. ಅಕ್ಕಿ ಬೆಲೆ ಗಗನಕ್ಕೆ ಏರಿರೋ ಈ ಟೈಮ್ ಅಲ್ಲಿ ಅನ್ನಾನಾ ಹಾಳು ಮಾಡೋಕಾಗಲ್ಲಾ. ಹಾಗಂತಾ ಮತ್ತೆ ಉಟಾ ಮಾಡೋಕು ಬೇಜಾರು. ಹಾಗಿದ್ರೆ ಉಳಿದಿರೋ ಅನ್ನವನ್ನ ಹೇಗೆ ಬಳಸಬೇಕು ಅಂತೀರಾ, ನಾವು ಹೇಳ್ತೀವಿ ನೋಡಿ,
 
1. ಅನ್ನದ ಖೀರು(ಪಾಯಸ):
ಬೇಕಾಗುವ ಸಾಮಗ್ರಿಗಳು:
 
ಅನ್ನ - 1 ಕಪ್
ಹಾಲು - 2 ಕಪ್
1/2 ಚಮಚ ಏಲಕ್ಕಿ ಪುಡಿ
ಸಕ್ಕರೆ - 6-7 ಚಮಚ
ಬಾದಾಮಿ, ದ್ರಾಕ್ಷಿ, ಗೋಡಂಬಿ - ಸ್ವಲ್ಪ
ಕೇಸರಿ - 2 ಚಿಟಿಕೆ
 
ಮಾಡುವ ವಿಧಾನ:
ಒಂದು ಬಾಣೆಲೆಯನ್ನು ಮಧ್ಯವ ಉರಿಯಲ್ಲಿ ಸ್ಟೌ ಮೇಲಿಟ್ಟು ಅದಕ್ಕೆ ಹಾಲು, ಸಕ್ಕರೆ, ಕೇಸರಿ, ಅನ್ನ ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ. ಪಾತ್ರೆಯ ಬುಡ ಹಿಡಿಯದಂತೆ ಪಾಯಸವನ್ನು 15-20 ನಿಮಿಷ ಕಲಕುತ್ತಿರಿ. ಹಾಲು ಸ್ವಲ್ಪ ಗಟ್ಟಿಯಾಗುತ್ತಾ ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ ಮತ್ತು ದ್ರಾಕ್ಷಿಯನ್ನು ಪಾಯಸಕ್ಕೆ ಸೇರಿಸಿದರೆ ಬಿಸಿ ಬಿಸಿಯಾದ ಪಾಯಸ ಸವಿಯಲು ರೆಡಿಯಾಗುತ್ತದೆ. ನೀವು ಇದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಡೆಸರ್ಟ್‌ನ ರೂಪದಲ್ಲೂ ತಿನ್ನಬಹುದು.
 
2. ಮೊಸರನ್ನ:
webdunia
ಬೇಕಾಗುವ ಸಾಮಗ್ರಿಗಳು:
ಅನ್ನ - 1 ಕಪ್
ಮೊಸರು - 2 ಕಪ್
ಹಾಲು - 1/2 ಕಪ್
ಇಂಗು - ಚಿಟಿಕೆ
ಸಾಸಿವೆಕಾಳು - 1 ಚಮಚ
ಹೆಚ್ಚಿದ ಕರಿಬೇವು - ಸ್ವಲ್ಪ
ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ
ಹೆಚ್ಚಿದ ಶುಂಠಿ - 1 ಇಂಚು
ಉಪ್ಪು - ರುಚಿಗೆ
ಎಣ್ಣೆ - 2 ಚಮಚ
 
ಮಾಡುವ ವಿಧಾನ:
 
ಅನ್ನವನ್ನು ಇನ್ನೊಮ್ಮೆ ಪ್ರಶರ್ ಕುಕ್ಕರ್‌ನಲ್ಲಿಟ್ಟು 3-4 ಸೀಟಿ ಹಾಕಿಸಿ. ಅನ್ನ ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ಮೊಸರು ಸೇರಿಸಿ ಒಂದು ಚಮಚದಿಂದ ಅನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಹಾಲನ್ನು ಹಾಕಿ ಇನ್ನೊಮ್ಮೆ ಮಿಕ್ಸ್ ಮಾಡಿ ಇಡಿ. ನಂತರ ಒಂದು ಬಾಣಲೆಯನ್ನು ಸಣ್ಣ ಉರಿಯಲ್ಲಿ ಸ್ಟೌ ಮೇಲಿಟ್ಟು ಅದಕ್ಕೆ 2 ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಕರಿಬೇವು, ಇಂಗನ್ನು ಹಾಕಿ ಒಗ್ಗರಣೆಯನ್ನು ರೆಡಿ ಮಾಡಿಕೊಂಡು ಸ್ಟೌ ಆಫ್ ಮಾಡಿ. ಇದಕ್ಕೆ ಈ ಮೊದಲೇ ರೆಡಿ ಮಾಡಿರುವ ಅನ್ನದ ಮಿಶ್ರಣವನ್ನು ಸೇರಿಸಿ. ನಂತರ ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಉಪ್ಪನ್ನು ಸೇರಿಸಿ ಮಿಕ್ಸ ಮಾಡಿದರೆ ಮೊಸರನ್ನ ರೆಡಿಯಾಗುತ್ತದೆ.
 
3. ತಾಳಿಪಟ್ಟು:
webdunia
ಬೇಕಾಗುವ ಸಾಮಗ್ರಿಗಳು:
ಅನ್ನ - 1 ಕಪ್
ಅಕ್ಕಿ ಹಿಟ್ಟು - 1/2 ಕಪ್
ಮೈದಾ ಹಿಟ್ಟು (ಗೋದಿ ಹಿಟ್ಟು) - 1/4 ಕಪ್
ಹೆಚ್ಚಿದ ಈರುಳ್ಳಿ - 2
ಹೆಚ್ಚಿದ ಟೊಮೆಟೋ - 1
ಹೆಚ್ಚಿದ ಕರಿಬೇವು - ಸ್ವಲ್ಪ
ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ
ಹೆಚ್ಚಿದ ಹಸಿಮೆಣಸು - 2
ತುರಿದ ಕ್ಯಾರೆಟ್ - 1
ತುರಿದ ಶುಂಠಿ - 1 ಇಂಚು
ಉಪ್ಪು - ರುಚಿಗೆ
ತುಪ್ಪ - ಸ್ವಲ್ಪ
 
ಮಾಡುವ ವಿಧಾನ:
 
ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಚೆನ್ನಾಗಿ ಸ್ಮ್ಯಾಶ್ ಮಾಡಿರುವ ಅನ್ನ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಈರುಳ್ಳಿ, ಹೆಚ್ಚಿದ ತರಕಾರಿಗಳು, ಉಪ್ಪು, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನೂ ಹಾಕಿ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಧ್ಯಮ ಗಾತ್ರದ ಉಂಡೆಯನ್ನಾಗಿ ಮಾಡಿ ಅದನ್ನು ರೊಟ್ಟಿಯ ಆಕಾರಕ್ಕೆ ತಟ್ಟಿ ಕಾದ ಕಾವಲಿಯಮೇಲೆ ಹಾಕಿ ಒಂದು ಚಮಚ ತುಪ್ಪವನ್ನು ಸವರಿ ಬೇಯಿಸಿದರೆ ತಾಳಿಪಟ್ಟು ರೆಡಿಯಾಗುತ್ತದೆ. ಹೀಗೆ ನೀವು ಇದರಲ್ಲಿ ಸೊಪ್ಪು ಅಥವಾ ಇನ್ನು ಯಾವುದೇ ತರಕಾರಿಗಳನ್ನು ಬಳಸಬಹುದು.
 
4. ಅನ್ನದ ದೋಸೆ:
webdunia
ಬೇಕಾಗುವ ಸಾಮಗ್ರಿಗಳು:
ಅನ್ನ - 1 ಕಪ್
ಅಕ್ಕಿ ಹಿಟ್ಟು - 1 ಕಪ್
ಗೋಧಿ ಹಿಟ್ಟು - 1/2 ಕಪ್
ಅಡುಗೆ ಸೋಡ - 1/2 ಚಮಚ
ಮೊಸರು - 1/4 ಕಪ್
ಉಪ್ಪು - ರುಚಿಗೆ
ತುಪ್ಪ - ಸ್ವಲ್ಪ
 
ಮಾಡುವ ವಿಧಾನ:
ಮಿಕ್ಸಿ ಜಾರ್‌ಗೆ ಅನ್ನ ಮತ್ತು ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಿ. ಒಂದು ಬೌಲ್‌ನಲ್ಲಿ ರುಬ್ಬಿಕೊಂಡಿರುವ ಅನ್ನ, ಅಕ್ಕಿ ಹಿಟ್ಟು, ಮೊಸರು, ಗೋಧಿ ಹಿಟ್ಟು, ಅಡುಗೆ ಸೋಡ, ಉಪ್ಪು ಮತ್ತು ನಿಮಗೆ ಬೇಕಾದ ಹದಕ್ಕೆ ನೀರನ್ನು ಹಾಕಿ ಚೆನ್ನಾಗಿ ಕಲಕಿ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ. ಕಾದ ಕಾವಲಿಯ ಮೇಲೆ ದೋಸೆ ಹಿಟ್ಟನ್ನು ಹಾಕಿ ಹರಡಿ ಅದರ ಮೇಲೆ ಸ್ವಲ್ಪ ತುಪ್ಪವನ್ನು ಸವರಿದರೆ ಅನ್ನದ ದೋಸೆ ರೆಡಿಯಾಗುತ್ತದೆ.
 
ಅನ್ನವನ್ನು ಹಾಳುಮಾಡುವ ಬದಲು ಮಾಡಲು ತುಂಬಾ ಸುಲಭವಾಗಿರುವ ಈ ತಿಂಡಿಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮರಿ ಬದಲಿಗೆ ಮೊಟ್ಟೆ ಇಡುವ ಪ್ರಾಣಿಗಳು