Publish Date: Mon, 17 Sep 2018 (15:19 IST)
Updated Date: Mon, 17 Sep 2018 (15:29 IST)
ಬೆಂಗಳೂರು: ಸಮುದ್ರದಲ್ಲಿ ಸಿಗುವ ಮೀನುಗಳಲ್ಲಿ ಸೀಗಡಿ ಕೂಡ ಒಂದು. ಇದು ಎಲ್ಲರೂ ಇಷ್ಟಪಡುವಂತಹ, ರುಚಿಕರವಾದ ಮಾಂಸಹಾರ. ಸೀಗಡಿಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಸೀಗಡಿ ಹಾಕಿ ಮಾಡಿದ ಎಲ್ಲಾ ಅಡುಗೆಯು ರುಚಿಕರವಾಗಿಯೇ ಇರುತ್ತದೆ. ಇದರಲ್ಲಿ ಸೀಗಡಿ ಸಾರು ಮಾಡುವುದು ಹೇಗೆಂದು ನೋಡೋಣ.
ಸೀಗಡಿ ಸಾರು ಮಾಡಲು ಬೇಕಾಗುವ ಸಾಮಾಗ್ರಿಗಳು :
ಚೆನ್ನಾಗಿ ತೊಳೆದಿಟ್ಟುಕೊಂಡ ಸೀಗಡಿ ಮೀನು 200 ಗ್ರಾಂ, ಬೆಳ್ಳುಳ್ಳಿ 12 ಎಸಳು, ತೆಂಗಿನಹಾಲು 1 ಕಪ್, ಅಚ್ಚಕಾರದ ಪುಡಿ 1 ಟೀ ಸ್ಪೂನ್, ದನಿಯಾಪುಡಿ ½ ಟೀ ಸ್ಪೂನ್, ಮೆಂತೆ ಸ್ವಲ್ಪ, ಕತ್ತರಿಸಿಟ್ಟುಕೊಂಡ ಈರುಳ್ಳಿ 2, ಸಾಸಿವೆ 1 ಚಿಟಿಕೆ, ಲಿಂಬೆ ಹಣ್ಣು 2, ತೆಂಗಿನ ಎಣ್ಣೆ 2 ಟೀ ಸ್ಪೂನ್, ಶುಂಠಿ ¼ ಇಂಚು, ಜೀರಿಗೆ 1 ಚಿಟಿಕೆ, ಕರಿಬೇವು ಸ್ವಲ್ಪ, ಉಪ್ಪು ರುಚಿಗೆ ಬೇಕಾದಷ್ಟು, ಅರಶಿನ ಸ್ವಲ್ಪ.
ಸೀಗಡಿ ಸಾರು ಮಾಡುವ ರೀತಿ :
ಒಂದು ಬಾಣಲೆಯನ್ನು ಕಾಯಿಸಿ ಅದಕ್ಕೆ 1 ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಈರುಳ್ಳಿ ಹಾಕಿ ಅದು ಕೆಂಬಣ್ಣ ಬರುವವರೆಗೂ ಹುರಿಯಿರಿ, ನಂತರ ಅದಕ್ಕೆ ತೊಳೆದಿಟ್ಟುಕೊಂಡ ಸೀಗಡಿ, ಉಪ್ಪು, ಅರಶಿನ ಹಾಕಿ ನೀರು ಹಾಕದೆ ಮುಚ್ಚಳ ಮುಚ್ಚಿ 5 ನಿಮಷಗಳ ಕಾಲ ಬೇಯಿಸಿ. ಆದರೆ ಸಿಗಡಿಯನ್ನು ಹೆಚ್ಚು ಬೇಯಿಸಬೇಡಿ. ಯಾಕೆಂದರೆ ಅದು ರುಚಿ ಕಳೆದುಕೊಳ್ಳುತ್ತದೆ.
ನಂತರ ಮಿಕ್ಸಿ ಜಾರಿಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಅಚ್ಚಕಾರದ ಪುಡಿ, ಹುರಿದ ದನಿಯಾ ಪುಡಿ, ಹುರಿದ ಮೆಂತೆ, ಸಾಸಿವೆ, ಮತ್ತು ಜೀರಿಗೆ ಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಇನ್ನೊಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ, ಅದು ಕಾದ ನಂತರ ಕರಿಬೇವು ಹಾಕಿ ನಂತರ ರುಬ್ಬಿಟ್ಟುಕೊಂಡ ಮಸಾಲೆಯನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಆಮೇಲೆ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು ಮತ್ತು ನಿಂಬೆರಸವನ್ನು ಹಾಕಿ ಕುದಿಸಿ. ನಂತರ ತೆಂಗಿನಕಾಯಿ ಹಾಲನ್ನು ಹಾಕಿ ಮಿಕ್ಸ್ ಮಾಡಿ ಒಂದು ಕುದಿ ಬಂದ ಮೇಲೆ ಬೇಯಿಸಿದ ಸೀಗಡಿಯನ್ನು ಹಾಕಿ ಒಂದೆರಡು ಸಲ ಕುದಿಸಿ ಇಳಸಿದರೆ ಸೀಗಡಿ ಸಾರು ರೆಡಿ. ಇದನ್ನು ಅನ್ನದ ಜೊತೆ ಹಾಗೂ ಅಕ್ಕಿ ರೊಟ್ಟಿಯ ಜೊತೆ ತಿಂದರೆ ಬಲು ರುಚಿಯಾಗಿರುತ್ತದೆ.
pavithra
Publish Date: Mon, 17 Sep 2018 (15:19 IST)
Updated Date: Mon, 17 Sep 2018 (15:29 IST)