ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ನವಣೆ 1 ಕಪ್
* ಹೆಸರುಬೇಳೆ/ತೊಗರಿಬೇಳೆ 1/2 ಕಪ್
* ತರಕಾರಿಗಳು- ಕ್ಯಾರೆಟ್, ಈರುಳ್ಳಿ, ಹುರುಳಿಕಾಯಿ, ಬಟಾಣಿ, ಹೂಕೋಸು, ನವಿಲುಕೋಸು, ಆಲೂಗಡ್ಡೆ, ಒಂದರಿಂದ ಒಂದೂವರೆ ಕಪ್
* ಶೇಂಗಾ ಬೀಜ ಸ್ವಲ್ಪ
* ಬಿಸಿಬೇಳೆಬಾತ್ ಪುಡಿ 4 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಹುಣಸೇ ರಸ ಸ್ವಲ್ಪ
* ತೆಂಗಿನತುರಿ 1/2 ಕಪ್
ತಯಾರಿಸುವ ವಿಧಾನ:
ಮೊದಲು ನವಣೆಯನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. (ಇಲ್ಲವಾದರೆ ಬಾಣಲೆಯಲ್ಲಿ ನವಣೆಯನ್ನು ಚೆನ್ನಾಗಿ ಹುರಿದು ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟರೆ ಬೇಗ ಮೃದುವಾಗುತ್ತದೆ) ನಂತರ ಕುಕ್ಕರಿನಲ್ಲಿ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ಈರುಳ್ಳಿಯನ್ನು ಹಾಕಿ ಹುರಿದು ತರಕಾರಿಗಳನ್ನು ಸೇರಿಸಬೇಕು. ನಂತರ ಮಿಕ್ಸಿಯಲ್ಲಿ ಬಿಸಿಬೇಳೆಬಾತ್ ಪುಡಿ, ತೆಂಗಿನತುರಿ, ಉಪ್ಪು, ಹುಣಸೇ ರಸಕ್ಕೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ತರಕಾರಿ ಮಿಶ್ರಣಕ್ಕೆ ಸೇರಿಸಬೇಕು. ನಂತರ ಹೆಸರುಬೇಳೆಯನ್ನು ಸೇರಿಸಬೇಕು. ನಂತರ ನವಣೆಯನ್ನು ಚೆನ್ನಾಗಿ ತೊಳೆದು ಐದು ಕಪ್ ನೀರನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಐದರಿಂದ ಆರು ವಿಷಲ್ ಕೂಗಿಸಬೇಕು. ಈಗ ರುಚಿಯಾದ ಆರೋಗ್ಯಕರವಾದ ನವಣೆ ಬಿಸಿಬೇಳೆಬಾತ್ ಸವಿಯಲು ಸಿದ್ಧ.
ನಿಮಗೆ ಬೇಕಾದಲ್ಲಿ ಬಿಸಿಬೇಳೆಬಾತ್ ಪುಡಿಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ಅದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಧನಿಯಾ 4 ಟೀ ಚಮಚ. ಕಡಲೆಬೇಳೆ 4 ಚಮಚ, ಉದ್ದಿನಬೇಳೆ 2 ಟೀ ಚಮಚ, ಮೆಂತ್ಯ 1/4 ಟೀ ಚಮಚ, ಕಾಳುಮೆಣಸು 1/2 ಚಂಚ, ಏಲಕ್ಕಿ 2, ಚಕ್ಕೆ 1 ಇಂಚು, ಕರಿಬೇವು ಸ್ವಲ್ಪ, ಗಸಗಸೆ 2 ಟೀ ಚಮಚ, ಎಳ್ಳು 1 ಟೀ ಚಮಚ, ಎಣ್ಣೆ 1 ಚಮಚ, ಬ್ಯಾಡಗಿ ಮೆಣಸಿನಕಾಯಿ 10, ಲವಂಗ 4, ಒಣಕೊಬ್ಬರಿ 2 ಚಮಚ,
ತಯಾರಿಸುವ ವಿಧಾನ: ಆ ಮೇಲಿನ ಎಲ್ಲಾ ಪದಾರ್ಥಗಳನ್ನು ಎಣ್ಣೆಯಲ್ಲಿ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು