ಪ್ರೊಟಿನ್ ಭರಿತ ತೊಗರಿಬೇಳೆಯನ್ನು ಉಪಯೋಗಿಸಿ ಒಂದು ರುಚಿಕರವಾದ ಚಟ್ನಿಯನ್ನು ತಿಳಿಸುವೆ. ಇದನ್ನು ಅನ್ನಕ್ಕೆ ಹಾಗೂ ದೋಸೆ, ರೊಟ್ಟಿಗಳಿಗೆ ನೆಂಚಿಕೊಂಡು ತಿನ್ನಲು ಉಪಯೋಗಿಸಬಹುದಾಗಿದೆ.
ಬೇಕಾಗುವ ಪದಾರ್ಥಗಳು:
ತೊಗರಿಬೇಳೆ- 1 ಕಪ್
ಒಣ ಮೆಣಸಿನ ಕಾಯಿ- 7-8
ತೆಂಗಿನಕಾಯಿ- 1 ಹೋಳು
ಹುಣಸೆಹಣ್ಣು- 2-3 ಎಸಳು
ಕರಿಬೇವು- 6-8 ಎಲೆಗಳು
ಒಗ್ಗರಣೆಗೆ ಎಣ್ಣೆ- 1 ಚಮಚ
ಸಾಸಿವೆ ಕಾಳು- ಕಾಲು ಚಮಚ
ಮಾಡುವ ವಿಧಾನ:
ಮೊದಲು ಫ್ರೈಯಿಂಗ್ ಪ್ಯಾನ್ ಗೆ ಎಣ್ಣೆಯನ್ನು ಹಾಕದೆ ತೊಗರಿಬೇಳೆಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಕೆಂಪಗಾಗುವವರೆಗೆ ಹುರಿದು ತೆಗೆದು ಪಕ್ಕಕ್ಕಿಡಿ. ಅದೇ ಪ್ಯಾನ್ ಗೆ ಒಂದೆರಡು ಹನಿ ಎಣ್ಣೆ ಹಾಕಿಕೊಂಡು ಒಣ ಮೆಣಸಿನ ಕಾಯಿಗಳನ್ನು ಗರಿಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದು ತೆಗೆದಿಡಿ. ಹಾಗೇ ಕರಿಬೇವಿನ ಎಲೆಗಳನ್ನು ಗರಿಗರಿಯಾಗುವವರೆಗೆ ಹುರಿದುಕೊಳ್ಳಿ.
ಈಗ ಹುರಿದ ಮೂರೂ ಪದಾರ್ಥಗಳನ್ನು ಮಿಕ್ಸರ್ ಜಾರ್ ಗೆ ಹಾಕಿಕೊಂಡು ಜೊತೆಯಲ್ಲಿ ತೆಂಗಿನ ತುರಿ, ಹುಣಸೆಹಣ್ಣು ಮತ್ತು ಉಪ್ಪನ್ನು ಹಾಕಿಕೊಂಡು ನೀರನ್ನು ಸೇರಿಸಿಕೊಂಡು ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.
ಕೊನೆಯಲ್ಲಿ ಒಗ್ಗರಣೆ ಬಟ್ಟಲಿಗೆ ಒಂದು ಚಮಚ ಎಣ್ಣೆ ಹಾಕಿ ಸಾಸಿವೆಕಾಳು ಹಾಕಿ. ಸಿಡಿದಾಗ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿ. ರುಚಿಕರವಾದ ತೊಗರಿ ಚಟ್ನಿ ಸಿದ್ಧ. ಇದನ್ನು ಅನ್ನಕ್ಕೆ ಹಾಕಿಕೊಂಡು ತಿನ್ನಲು ಬಲು ರುಚಿ. ದೋಸೆ, ಚಪಾತಿಯ ಜೊತೆ ನೆಂಚಿಕೊಳ್ಳಲೂ ಚೆನ್ನಾಗಿರುತ್ತದೆ. ಕರಿಬೇವಿನ ಬದಲು ಅರ್ಧ ಹಸಿ ಈರುಳ್ಳಿಯನ್ನು ಬೇಕೆಂದಲ್ಲಿ ಸೇರಿಸಿಕೊಳ್ಳಬಹುದು.