ಪೂರಿ ಮಾಡುವುದು ಹೇಗೆ ಎನ್ನುವುದು ನಿಮಗೆಲ್ಲಾ ತಿಳಿದೇ ಇರುತ್ತದೆ. ಹೆಚ್ಚಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಪೂರಿಯನ್ನು ಮಾಡುತ್ತಾರೆ. ಆದರೆ ಮಸಾಲೆ ಪದಾರ್ಥಗಳನ್ನು ಸೇರಿಸಿ ಪೂರಿ ಮಾಡುವುದನ್ನು ಕೇಳಿದ್ದೀರಾ? ಇಲ್ಲ ಎನ್ನುವುದಾದರೆ ಈ ಲೇಖನವನ್ನು ಓದಿ ಮಸಾಲಾ ಪೂರಿ ಮಾಡುವ ವಿಧಾನವನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು - 1 ಕಪ್
ಓಮಕಾಳು - 1 ಚಮಚ
ದನಿಯಾ ಪುಡಿ - 1 ಚಮಚ
ಅಚ್ಚಖಾರದ ಪುಡಿ - 1 ಚಮಚ
ಚಾಟ್ ಮಸಾಲಾ - 1 ಚಮಚ
ಗರಂ ಮಸಾಲಾ - 1/2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು - 1/4 ಕಪ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ
ಮಾಡುವ ವಿಧಾನ:
ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟು, ಓಮಕಾಳು, ಅಚ್ಚಖಾರದ ಪುಡಿ, ದನಿಯಾ ಪುಡಿ, ಚಾಟ್ ಮಸಾಲಾ, ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು 2 ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅಗತ್ಯವಿರುವಷ್ಟು ನೀರನ್ನು ಹಾಕಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಹೀಗೆ ರೆಡಿಯಾದ ಹಿಟ್ಟನ್ನು 1/2 ಗಂಟೆ ಹಾಗೆಯೇ ಬಿಡಿ.
ಒಂದು ಬಾಣಲೆಯನ್ನು ಸ್ಟೌ ಮೇಲಿಟ್ಟು ಕರಿಯಲು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಇನ್ನೊಂದು ಕಡೆ ಈ ಮೊದಲೇ ರೆಡಿ ಮಾಡಿಟ್ಟ ಹಿಟ್ಟಿನ ಉಂಡೆಯನ್ನು ಚೆನ್ನಾಗಿ ನಾದಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಆ ಉಂಡೆಗಳಿಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು ಲಟ್ಟಿಸಿ ಅದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ಮಸಾಲಾ ಪೂರಿ ರೆಡಿಯಾಗುತ್ತದೆ. ಇದನ್ನು ನೀವು ಕೊಬ್ಬರಿ ಚಟ್ನಿಯೊಂದಿಗೆ ಅಥವಾ ಆಲೂಗಡ್ಡೆಯ ಪಲ್ಯದೊಂದಿಗೆ ಸವಿಯಬಹುದು.