ಬಗೆ ಬಗೆಯ ರೈಸ್ ಬಾತಗಳನ್ನು ಮಾಡಿಕೊಂಡು ತಿನ್ನುವುದು ಈಗ ಕಾಮನ್ ಆಗಿಬಿಟ್ಟಿದೆ. ಅಂಗಡಿಗಳಿಂದ ರೆಡಿಮೆಡ್ ಆಗಿ ಸಿಗುವ ರೈಸ್ ಬಾತ್‌ಗಳ ಪುಡಿಯನ್ನು ಅನ್ನದ ಜೊತೆ ಮಿಕ್ಸ್ ಮಾಡಿ ತಿನ್ನುವವರು ಒಂದೆಡೆಯಾದರೆ ಮೊದಲೇ ಕೆಲವು ಗೊಜ್ಜುಗಳನ್ನು ಮಾಡಿಕೊಂಡು ಅದಕ್ಕೆ ಅನ್ನವನ್ನು ಕಲೆಸಿ ತಿನ್ನುವವರು ಒಂದೆಡೆ.
ಅಂತಹುದರಲ್ಲಿ ಪುಳಿಯೊಗರೆ ಗೊಜ್ಜು ಅನ್ನ, ವಾಂಗೀಬಾತ್‌ಗಳ ಸಾಲಿನಲ್ಲಿ ಮಾವಿನಕಾಯಿ ಗೊಜ್ಜು ಅನ್ನ ಕೂಡಾ ಒಂದು. ಈ ಗೊಜ್ಜನ್ನು ಒಂದು ಸಲ ಮಾಡಿಕೊಂಡರೆ ನಂತರ ಬೇಕಾದಾಗ ಅದಕ್ಕೆ ಅನ್ನವನ್ನು ಕಲೆಸಿ ತಿನ್ನಬಹುದು. ಹಾಗಾದರೆ ಮಾವುನಕಾಯಿ ಗೊಜ್ಜು ಅನ್ನವನ್ನು ಮಾಡುವುದು ಹೇಗೆ ಎಂದು ಹೇಳ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಹುಳಿ ಮಾವಿನಕಾಯಿ 1
* 1 ಟೀ ಚಮಚ ಸಾಸಿವೆ
* 1 ಟೀ ಚಮಚ ಮೆಂತ್ಯ
* 15 ರಿಂದ 20 ಒಣಮೆಣಸಿನಕಾಯಿ
* ಎಣ್ಣೆ
* ಕಡಲೆಬೇಳೆ
* ಉದ್ದಿನಬೇಳೆ
* ಕರಿಬೇವು
* ಇಂಗು
* ಅನ್ನ
ತಯಾರಿಸುವ ವಿಧಾನ :
ಮೊದಲು 1 ದೊಡ್ಡ ಹುಳಿ ಮಾವಿನಕಾಯಿಯನ್ನು ತುರಿದಿಟ್ಟುಕೊಳ್ಳಬೇಕು. ನಂತರ 1 ಟೀ ಚಮಚ ಸಾಸಿವೆ, 1 ಟೀ ಚಮಚ ಮೆಂತ್ಯವನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ಇದರೊಂದಿಗೆ 15 ರಿಂದ 20 ಒಣಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಅದಕ್ಕೆ ಮೆಂತ್ಯ, ಸಾಸಿವೆಯೊಂದಿಗೆ ಪುಡಿ ಮಾಡಬೇಕು. ನಂತರ ಬಾಣಲೆಗೆ 5 ಚಮಚ ಎಣ್ಣೆಯನ್ನು ಹಾಕಿ ಒಗ್ಗರಣೆಗೆ ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಕರಿಬೇವು, ಇಂಗು ಹಾಕಿ ಈಗಾಗಲೇ ತುರಿದ ಮಾವಿನಕಾಯಿಯನ್ನು ಹಾಕಿ ಎಣ್ಣೆಯಲ್ಲಿ ಬೇಯಿಸಬೇಕು (ನೀರು ಹಾಕಬಾರದು) ನಂತರ ಮೆಣಸಿನಕಾಯಿ ಪುಡಿ, ಸಾಸಿವೆ, ಮೆಂತ್ಯಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲವನ್ನು ಹಾಕಿ ಕಲೆಸಬೇಕು. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ 6 ರಿಂದ 7 ನಿಮಿಷ ಬೇಯಿಸಿದರೆ ರುಚಿಯಾದ ಮಾವಿನಕಾಯಿ ಗೊಜ್ಜು ರೆಡಿ. ಈ ಗೊಜ್ಜನ್ನು ನಿಮಗೆ ಬೇಕಾದಾಗ ಅನ್ನದೊಂದಿಗೆ ಕಲೆಸಿಕೊಂಡು ತಿನ್ನಬಹುದು.