ಹಾಲುಸೋರೆಕಾಯಿ ತಂಪು ಅಂಶವನ್ನು ಹೊಂದಿರುವ ತರಕಾರಿಯಾಗಿದೆ. ಇದು ದೇಹದಲ್ಲಿನ ಹೆಚ್ಚಿನ ಉಷ್ಣಾಂಶ ಮತ್ತು ಯಾವುದೇ ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಲುಸೋರೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿರುವವರಿಗೆ ಬಹಳ ಒಳ್ಳೆಯದು. ಯಾವಾಗಲೂ ಹಾಲುಸೋರೆಕಾಯಿಂದ ಪಲ್ಯ, ಸಾಂಬಾರ್ ಅಂತದ್ದನ್ನು ಮಾಡುವ ಬದಲು ಸಿಹಿಯಾದ ಹಲ್ವಾವನ್ನು ಹೇಗೆ ಮಾಡುವುದು ಎಂಬುದನ್ನು ನೋಡೋಣ.
ಬೇಕಾಗುವ ಸಾಮಗ್ರಿಗಳು:
ತುರಿದ ಹಾಲುಸೋರೆಕಾಯಿ - 1 ಕಪ್
ಹಾಲು - 1 ಕಪ್
ಸಕ್ಕರೆ - 3/4 ಕಪ್
ತುಪ್ಪ - 1/4 ಕಪ್
ಬಾದಾಮಿ - ಒಂದು ಹಿಡಿ
ಗೋಡಂಬಿ - ಒಂದು ಹಿಡಿ
ಒಣದ್ರಾಕ್ಷಿ - ಒಂದು ಹಿಡಿ
ಏಲಕ್ಕಿ ಪುಡಿ - 1/2 ಚಮಚ
ಹಾಲು ಪೌಡರ್ - 1/2 ಕಪ್
ಮಾಡುವ ವಿಧಾನ:
ಹಾಲುಸೋರೆಕಾಯಿಯ ಸಿಪ್ಪೆಯನ್ನು ತೆಗೆದು ಅದರಲ್ಲಿ ಬೀಜವಿದ್ದರೆ ಅದನ್ನು ಬೇರ್ಪಡಿಸಿ ತುರಿದಿಟ್ಟುಕೊಳ್ಳಿ. ಗೋಡಂಬಿ ಮತ್ತು ಬಾದಾಮಿಯನ್ನು ಮಧ್ಯಮ ಗಾತ್ರದ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ.
ಒಂದು ತವಾವನ್ನು ತೆಗೆದುಕೊಂಡು ಅದರಲ್ಲಿ 1/4 ಕಪ್ ತುಪ್ಪವನ್ನು ಹಾಕಿ ಅದು ಬಿಸಿಯಾದಾಗ ಗೋಡಂಬಿ, ಬಾದಾಮಿ, ದ್ರಾಕ್ಷಿಗಳನ್ನು ಹಾಕಿ ಹೊಂಬಣ್ಣಬರುವವರೆಗೆ ಹುರಿದು ತೆಗೆದಿಡಿ. ತುರಿದ ಹಾಲುಸೋರೆಕಾಯಿಯನ್ನು ತವಾದಲ್ಲಿ ಹಾಕಿ ತುಪ್ಪದಲ್ಲಿ 2-3 ನಿಮಿಷ ಹುರಿದು ನಂತರ ಅದಕ್ಕೆ 1/2 ಕಪ್ ಹಾಲನ್ನು ಸೇರಿಸಿ 10 ನಿಮಿಷ ಬೇಯಿಸಿ. ಅದು ಚೆನ್ನಾಗಿ ಬೆಂದು ಹಾಲು ಆರುತ್ತಾ ಬಂದಂತೆ ಅದಕ್ಕೆ 3/4 ಕಪ್ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆಯು ಕರಗುತ್ತಾ ಬಂದನಂತರ 5 ನಿಮಿಷ ಅದನ್ನು ಚಿಕ್ಕ ಉರಿಯಲ್ಲಿ ಮಿಕ್ಸ್ ಮಾಡುತ್ತಾ ಇರಿ.
ಇನ್ನೊಂದು ಒಲೆಯ ಮೇಲೆ ಮತ್ತೊಂದು ತವಾ ಇಟ್ಟು 2 ಚಮಚ ತುಪ್ಪ ಮತ್ತು 1/4 ಕಪ್ ಹಾಲನ್ನು ಹಾಕಿ ಕುದಿಸಿ. ನಂತರ ಅದಕ್ಕೆ 1/2 ಕಪ್ ಹಾಲು ಪೌಡರ್ ಅನ್ನು ಸೇರಿಸಿ ಮಿಕ್ಸ್ ಮಾಡಿ. ಅದು ಗಟ್ಟಿಯಾಗುತ್ತಾ ತವಾವನ್ನು ಬಿಡಲು ಆರಂಭಿಸಿದಾಗ ಸ್ಟೌ ಆಫ್ ಮಾಡಿ ಆ ಮಿಶ್ರಣವನ್ನು(ಖೋವಾ) ಚಿಕ್ಕ ಉರಿಯಲ್ಲಿ ಬೇಯುತ್ತಿರುವ ಸೋರೆಕಾಯಿಯ ಪಾಕಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವು ಆರಿ ತವಾವನ್ನು ಬಿಡಲು ಆರಭಿಸಿದ ನಂತರ ಅದಕ್ಕೆ ಈ ಮೊದಲೇ ಹುರಿದಿಟ್ಟ ಗೋಡಂಬಿ, ಬಾದಾಮಿ ಮತ್ತು ದಾಕ್ಷಿಗಳನ್ನು ಮತ್ತು 1/2 ಚಮಚ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹಾಲುಸೋರೆಕಾಯಿ ಹಲ್ವಾ ರೆಡಿ. ಹೀಗೆ ಸರಳವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಹಾಲುಸೋರೆಕಾಯಿ ಹಲ್ವಾವನ್ನು ನೀವೂ ಒಮ್ಮೆ ಮಾಡಿ
ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.