Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬದನೆಕಾಯಿ ಎಣ್ಣೆಗಾಯಿ...!!!

ಬದನೆಕಾಯಿ ಎಣ್ಣೆಗಾಯಿ...!!!

ನಾಗಶ್ರೀ ಭಟ್

ಬೆಂಗಳೂರು , ಮಂಗಳವಾರ, 2 ಜನವರಿ 2018 (16:18 IST)
ಬೆಳಗಿನ ತಿಂಡಿ ದೋಸೆ, ಚಪಾತಿ, ರೊಟ್ಟಿಯ ಜೊತೆ ಅಥವಾ ಮಧ್ಯಾಹ್ನದ ಊಟದ ಜೊತೆ ಒಂದೇ ರೀತಿಯ ಪಲ್ಯ, ಚಟ್ನಿ ಅಥವಾ ಸಾಂಬಾರ್ ಅನ್ನು ಮಾಡಿ ಬೇಸರವಾಗಿದ್ದರೆ ನೀವು ಒಮ್ಮೆ ಬದನೆಕಾಯಿಯ ಎಣ್ಣಗಾಯಿಯನ್ನು ಮಾಡಿ ನೋಡಬಹುದು. ಬದನೆಕಾಯಿ ಎಣ್ಣೆಗಾಯಿ ಚಪಾತಿ, ಅಕ್ಕಿರೊಟ್ಟಿ, ದೋಸೆ ಮತ್ತು ಅನ್ನದ ಜೊತೆಯೂ ರುಚಿಯಾಗಿರುತ್ತದೆ. ನಿಮಗೂ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಬದನೆಕಾಯಿ - 10-15
ಈರುಳ್ಳಿ - 1-2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಸಾಸಿವೆ - 1 ಚಮಚ
ಜೀರಿಗೆ - 1/2 ಚಮಚ
ಉದ್ದಿನ ಬೇಳೆ - 1 ಚಮಚ
ಕರಿಬೇವು - 1 ಹಿಡಿ
ಕೊತ್ತಂಬರಿ ಸೊಪ್ಪು - 1 ಹಿಡಿ
ಎಣ್ಣೆ - 1/4 ಕಪ್
ಉಪ್ಪು - ರುಚಿಗೆ
ಹುಣಿಸೆ ಹಣ್ಣು - 1 ನಿಂಬೆ ಗಾತ್ರ
ಸ್ಟಫಿಂಗ್ ಮಸಾಲಾ:
ಶೇಂಗಾ - 1/2 ಕಪ್
ಕಾಯಿತುರಿ - 1/4 ಕಪ್
ದನಿಯಾ - 2 ಚಮಚ
ಜೀರಿಗೆ - 1 ಚಮಚ
ಮೆಂತೆ - 1/2 ಚಮಚ
ಅರಿಶಿಣ ಪುಡಿ - 1/2 ಚಮಚ
ಒಣಮೆಣಸು - 6-7
ಮಾಡುವ ವಿಧಾನ:
 
ಚಿಕ್ಕ ಚಿಕ್ಕ ಬದನೆಕಾಯಿಗಳನ್ನು ಚೆನ್ನಾಗಿ ತೊಳೆದು ಸ್ವಲ್ಪವೇ ಮೇಲ್ಭಾಗದಲ್ಲಿ ಕತ್ತರಿಸಿ ಅವುಗಳನ್ನು ಬೆಚ್ಚಗಿನ ನೀರಿಗೆ 1 ಚಮಚ ಉಪ್ಪನ್ನು ಹಾಕಿ 15-20 ನಿಮಿಷ ನೆನೆಸಿಡಿ. ಒಂದು ನಿಂಬೆಹಣ್ಣಿನ ಗಾತ್ರದ ಹುಣಿಸೆಹಣ್ಣನ್ನು ತೆಗೆದುಕೊಂಡು ಅದನ್ನು 1/4 ಕಪ್ ಬೆಚ್ಚಗಿನ ನೀರಿನಲ್ಲಿ 10-15 ನಿಮಿಷ ನೆನೆಸಿಡಿ. ನಂತರ ಅದನ್ನು ಚೆನ್ನಾಗಿ ಹಿಚುಕಿ ಹುಣಿಸೆ ಹಣ್ಣಿನ ಪಲ್ಪ್ ಅನ್ನು ತಯಾರಿಸಿಟ್ಟುಕೊಳ್ಳಿ.
 
ಒಂದು ಪ್ಯಾನ್ ತೆಗೆದುಕೊಂಡು ಸಣ್ಣ ಉರಿಯಲ್ಲಿ ಶೇಂಗಾ, ಕೊಬ್ಬರಿತುರಿ ಮತ್ತು ಒಣಮೆಣಸನ್ನು ಬೇರೆ ಬೇರೆಯಾಗಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದೇ ಪ್ಯಾನ್‌ನಲ್ಲಿ ಮೆಂತೆ, ದನಿಯಾ, ಜೀರಿಗೆಯನ್ನು ಹಾಕಿ ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಹುರಿದ ಮಸಾಲಾ ಸಾಮಗ್ರಿಗಳು ತಣ್ಣಗಾದ ನಂತರ ಅವೆಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ 1/2 ಚಮಚ ಅರಿಶಿಣ, 1 ಚಮಚ ಉಪ್ಪು, ಇಂಗು ಮತ್ತು ಈ ಮೊದಲೇ ತಯಾರಿಸಿರುವ ಹುಣಿಸೆ ಹಣ್ಣಿನ ಪಲ್ಪ್ ಅನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮೊದಲೇ ತೊಳೆದು ನೆನೆಸಿಟ್ಟಿರುವ ಎಲ್ಲಾ ಬದನೆಕಾಯಿಗಳಿಂದ ನೀರನ್ನು ತೆಗೆದು ಅದರಲ್ಲಿ ಈಗ ತಯಾರಿಸಿರುವ ಮಸಾಲಾವನ್ನು ತುಂಬಿಡಿ. ಉಳಿದ ಮಸಾಲಾವನ್ನೂ ಸಹ ಹಾಗೆಯೇ ಇಡಿ.
 
ಈಗ ಒಂದು ಚಿಕ್ಕ ಕುಕ್ಕರ್ ಅನ್ನು ತೆಗೆದುಕೊಂಡು ಸ್ಟೌ ಮೇಲಿಟ್ಟು 1/4 ಕಪ್ ಎಣ್ಣೆಯನ್ನು ಹಾಕಿ(ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಡಿಮೆ ಬಳಸಬಹುದು). ಅದು ಬಿಸಿಯಾದಾಗ ಅದಕ್ಕೆ ಸಾಸಿವೆಯನ್ನು ಹಾಕಿ ಅದು ಸಿಡಿಯಲು ಆರಂಭಿಸಿದಾಗ 1 ಚಮಚ ಉದ್ದಿನ ಬೇಳೆ ಮತ್ತು 1/2 ಚಮಚ ಜೀರಿಗೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಕರಿಬೇವನ್ನು ಹಾಕಿ ಹುರಿಯಿರಿ. ಈಗ ಉಳಿದ ಮಸಾಲಾ ಮತ್ತು 1 ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಸಾಲಾದಲ್ಲಿ ಈ ಮೊದಲೇ ಮಸಾಲಾವನ್ನು ತುಂಬಿದ ಬದನೆಕಾಯಿಗಳನ್ನು ಹಾಕಿ ಅದರ ಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಉದುರಿಸಿ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಸೇರಿಸಿ ಕುಕ್ಕರ್ ಅನ್ನು ಮುಚ್ಚಿ. 15-20 ನಿಮಿಷಗಳ ನಂತರ ಸ್ಟೌ ಆಫ್ ಮಾಡಿ. ಸ್ವಲ್ಪ ಸಮಯದ ನಂತರ ಮುಚ್ಚಳವನ್ನು ತೆಗೆದು ಅದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿಕೊಂಡರೆ ರುಚಿ ರುಚಿಯಾದ ಬದನೆಕಾಯಿ ಎಣ್ಣೆಗಾಯಿ ಸವಿಯಲು ಸಿದ್ಧ.
 
ಬದನೆಕಾಯಿ ಎಣ್ಣಗಾಯಿ ಮಾಡಲು ಸ್ವಲ್ಪ ಹೆಚ್ಚು ಸಮಯದ ಅಗತ್ಯವಿರುತ್ತದೆಯಾದರೂ ತಿನ್ನಲು ಬಹಳ ರುಚಿಯಾಗಿರುತ್ತದೆ. ನೀವೂ ಒಮ್ಮೆ ಬದನೆಕಾಯಿ ಎಣ್ಣಗಾಯಿ ಮಾಡಿ ಸವಿದು ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠಕರವಾದ ಚಿಕನ್ ಪೆಪ್ಪರ್ ಡ್ರೈ