ತಿರುಪತಿ: ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ಆರೋಪಗಳ ಬಳಿಕ ಈಗ ಪ್ರಸಾದ ಭೋಜನದ ಬಗ್ಗೆಯೂ ಆರೋಪ ಕೇಳಿಬಂದಿದೆ.
ತಿರುಪತಿ ದೇವಾಲಯದಲ್ಲಿ ಭಕ್ತರಿಗೆ ನೀಡಲಾಗಿದ್ದ ಅನ್ನ ಪ್ರಸಾದದಲ್ಲಿ ಹುಳ ಪತ್ತೆಯಾಗಿದೆ ಎಂದು ಭಕ್ತರೊಬ್ಬರು ಫೋಟೋ ಸಮೇತ ಆರೋಪ ಮಾಡಿದ್ದಾರೆ. ಈ ಬಗ್ಗೆ ತಿರುಪತಿ ಆಡಳಿತ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅವರ ಪ್ರತಿಕ್ರಿಯೆ ಆಘಾತಕಾರಿಯಾಗಿತ್ತು ಎಂದಿದ್ದಾರೆ.
ಪ್ರಸಾದ ರೂಪದಲ್ಲಿ ನೀಡಲಾಗಿದ್ದ ಮೊಸರನ್ನದಲ್ಲಿ ಹುಳಗಳು ಪತ್ತೆಯಾಗಿವೆ. ಈ ಬಗ್ಗೆ ಸಿಬ್ಬಂದಿಗಳ ಗಮನಕ್ಕೆ ತಂದಾಗ ಇದೆಲ್ಲಾ ಮಾಮೂಲು. ಸರ್ಕಾರಗಳು ಬದಲಾದರೂ ಇಂತಹ ಸಮಸ್ಯೆಗಳು ಇರುತ್ತವೆ ಎಂದಿರುವುದಾಗಿ ಭಕ್ತರು ಆರೋಪಿಸಿದ್ದಾರೆ. ಆದರೆ ಹುಳ ಪತ್ತೆಯಾಗಿರುವುದನ್ನು ತಿರುಪತಿ ತಿರುಮಲ ಟ್ರಸ್ಟ್ ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ಈಗಾಗಲೇ ಲಡ್ಡು ವಿವಾದದಿಂದಾಗಿ ಭಕ್ತರ ಭಾವನೆಗಳಿಗೆ ನೋವಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಸ್ವತಂತ್ರ ತನಿಖಾ ತಂಡ ರಚಿಸಲು ಆದೇಶಿಸಿತ್ತು. ಅದರ ನಡುವೆಯೇ ಈಗ ಅನ್ನಪ್ರಸಾದದಲ್ಲೂ ಹುಳ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಬರುವ ಭಕ್ತರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.