ನವದೆಹಲಿ: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ತನಿಖಾ ಸಮಿತಿ ರಚನೆ ಮಾಡಿರುವ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ರಾಜಕೀಯ ನಾಟಕ ನೋಡಲಾಗುತ್ತಿಲ್ಲ ಎಂದಿದೆ.
ತಿರುಪತಿ ಲಡ್ಡು ಪ್ರಸಾದಕ್ಕೆ ಜಗನ್ ರೆಡ್ಡಿ ಸಿಎಂ ಆಗಿದ್ದಾಗ ಪ್ರಾಣಿಗಳ ಕೊಬ್ಬು ಬಳಕೆಯಾಗುತ್ತಿತ್ತು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.
ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈಗ ವಿವಾದ ಇತ್ಯರ್ಥಗೊಳಿಸಲು ವಿಶೇಷ ಸಮಿತಿಯೊಂದನ್ನು ರಚನೆ ಮಾಡಲು ಆದೇಶಿಸಿದೆ. ತಿರುಪತಿ ಲಡ್ಡು ವಿವಾದ ಕೋಟ್ಯಾಂತರ ಭಕ್ತರ ಭಾವನೆಗೆ ಸಂಬಂಧಿಸಿದ್ದಾಗಿದೆ. ಈ ಸಂಬಂಧ ಸ್ವತಂತ್ರ ತನಿಖಾ ಸಂಸ್ಥೆಯೊಂದನ್ನು ರಚಿಸಿ ತನಿಖೆ ನಡೆಯಬೇಕಿದೆ ಎಂದಿದೆ.
ಸಿಬಿಐ, ರಾಜ್ಯ ಪೊಲೀಸ್ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೇರಿದಂತೆ ಐವರು ತಜ್ಞರನ್ನೊಳಗೊಂಡ ವಿಶೇಷ ಸಮಿತಿ ರಚನೆಯಾಗಲಿದೆ. ಈ ವಿಚಾರದಲ್ಲಿ ರಾಜಕೀಯ ನಾಟಕ ನೋಡಲು ನಾವು ಬಯಸುವುದಿಲ್ಲ. ಯಾಕೆಂದರೆ ಇದು ಭಕ್ತರ ನಂಬಿಕೆಯ ಪ್ರಶ್ನೆಯಾಗಿದೆ ಎಂದಿದೆ.