Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಡ್ಡಿದರ ಏರಿಕೆ, ಸುಂಕ ಕಡಿತದ ನಡುವೆಯೂ ಸಗಟುದರ ಹಣದುಬ್ಬರ ಜಿಗಿತ!

ಬಡ್ಡಿದರ ಏರಿಕೆ, ಸುಂಕ ಕಡಿತದ ನಡುವೆಯೂ ಸಗಟುದರ ಹಣದುಬ್ಬರ ಜಿಗಿತ!
bengaluru , ಮಂಗಳವಾರ, 14 ಜೂನ್ 2022 (18:12 IST)
ಚಿಲ್ಲರೆದರ (ಗ್ರಾಹಕ) ಹಣದುಬ್ಬರ ಇಳಿಯುತ್ತಿರುವ ಸಮಯದಲ್ಲೇ ಸಗಟು ದರ ಹಣದುಬ್ಬರ (ಡಬ್ಲ್ಯೂಪಿಐ) ಮತ್ತಷ್ಟು ಜಿಗಿದಿದೆ. ಮೇ ತಿಂಗಳ ಸಗಟು ದರ ಹಣದುಬ್ಬರ ಶೇ.15.88ಕ್ಕೆ ಜಿಗಿದಿದ್ದು ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೇರಿದೆ.
ಏಪ್ರಿಲ್ ತಿಂಗಳಲ್ಲಿ ಶೇ.15.08ರಷ್ಟಿತ್ತು. 2021 ಮೇ ತಿಂಗಳಲ್ಲಿ ಶೇ.13.11ರಷ್ಟಿತ್ತು. 2021 ಮಾರ್ಚ್ ತಿಂಗಳಿಂದಲೂ  ಸಗಟು ದರ ಹಣದುಬ್ಬರ  ಎರಡಂಕಿ ದಾಟುತ್ತಲ್ಲೇ ಇದೆ. 14 ತಿಂಗಳ ಹಿಂದೆ ಹತ್ತರ ಗಡಿದಾಟಿದ್ದು, ತಿಂಗಳಿಂದ ತಿಂಗಳಿಗೆ ಏರುತ್ತಲೇ ಸಾಗಿ ಈಗ ಶೇ.16ರ ಗಡಿ ಸಮೀಪಿಸುತ್ತಿದೆ.
ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು  95 ತಿಂಗಳ ಗರಿಷ್ಠಮಟ್ಟವಾದ ಶೇ.7.79ಕ್ಕೆ ಜಿಗಿದು ಆತಂಕ ಮೂಡಿಸಿತ್ತು.  ಅದೀಗ   ಮೇ ತಿಂಗಳಲ್ಲಿ ಶೇ.7.04ಕ್ಕೆ ಇಳಿದಿದೆ. ಆರ್ಬಿಐ ಬಡ್ಡಿದರ ಏರಿಕೆ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಖಾದ್ಯ ತೈಲಗಳ ಮೇಲಿನ ಸುಂಕ ಕಡಿತ ಮತ್ತಿತರ ಕ್ರಮಗಳಿಂದಾಗಿ ಗ್ರಾಹಕ ದರ ಹಣದುಬ್ಬರ ಮೇ ತಿಂಗಳಲ್ಲಿ ಕೊಂಚ ತಗ್ಗಿದೆ. ಆದರೆ, ಸಗಟುದರ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.
ಸಗಟುದರ ಹಣದುಬ್ಬರ ಲೆಕ್ಕಚಾರವನ್ನು ಹೊಸ ಸರಣಿಯಡಿ 2013ರಿಂದ ಹಾಕಲಾಗುತ್ತಿದೆ. ಮೇ ತಿಂಗಳಲ್ಲಿ ದಾಖಲಾಗಿರುವ ಸಗಟುದರ ಹಣದುಬ್ಬರ ಈ ಒಂಭತ್ತು ವರ್ಷಗಳಲ್ಲೇ ಅತ್ಯಧಿಕವಾಗಿದೆ ಎನ್ನುತ್ತವೆ ಅಂಕಿ ಅಂಶಗಳು. ಅರ್ಥಶಾಸ್ತ್ರಜ್ಞರ ಪ್ರಕಾರ, ಹಳೆಯ ಸರಣಿಯಂತೆ ಲೆಕ್ಕಾಚಾರ ಹಾಕಿದರೂ ಕೂಡಾ ಮೇ ತಿಂಗಳ ಸಗಟುದರ ಹಣದುಬ್ಬರ 30 ವರ್ಷಗಳಲ್ಲೇ ಅತ್ಯಧಿಕವಾಗಿದೆ.
ಬಹುತೇಕ ಎಲ್ಲಾ ಸರಕು ಮತ್ತು ಸೇವೆಗಳು ಮೇನಲ್ಲಿ ತಿಂಗಳಿಂದ ತಿಂಗಳ ಲೆಕ್ಕದಲ್ಲಿ ಶೇ.1.4ರಷ್ಟು ಏರಿಕೆಯಾಗಿವೆ. ಆದರೆ, ಪ್ರಾಥಮಿಕ ಸರಕುಗಳ ಸೂಚ್ಯಂಕವು 2.8 ಶೇಕಡಾ ಏರಿಕೆಯಾಗಿದೆ. ಪ್ರಾಥಮಿಕ ಸರಕುಗಳ ಪೈಕಿ ಆಹಾರ ಪದಾರ್ಥಗಳ ಸೂಚ್ಯಂಕವು ಏಪ್ರಿಲ್‌ನಿಂದ 2.4 ಪ್ರತಿಶತದಷ್ಟು ಏರಿತ್ತು. ವಿಶೇಷವಾಗಿ ತರಕಾರಿಗಳ ಬೆಲೆ ತೀವ್ರವಾಗಿ ಏರಿದ್ದು, ತಿಂಗಳಿಂದ-ತಿಂಗಳಿಗೆ ಶೇ.18.5 ಹೆಚ್ಚಳವಾಗಿದೆ.
ಇಂಧನ ಮತ್ತು ವಿದ್ಯುತ್ ಸೂಚ್ಯಂಕವು ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇ.2.3 ರಷ್ಟು ಹೆಚ್ಚಾಗಿದೆ. ಸಗಟುದರ ಹಣದುಬ್ಬರದಲ್ಲಿ ಶೇ. 64.23 ವೇಟೇಜ್ ಇರುವ ಸಿದ್ದ ಉತ್ಪನ್ನಗಳು ಶೇ. 0.6ರಷ್ಟು ಮಾತ್ರ ಏರಿಕೆಯಾಗಿವೆ.
ಭಾರತೀಯ ರಿಸರ್ವ ಬ್ಯಾಂಕ್ ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲೂ ಹಣದುಬ್ಬರ ಏರಿಕೆಯಾಗುವ ಮುನ್ನಂದಾಜು ಮಾಡಿತ್ತು. ಹಣದುಬ್ಬರ ನಿಯಂತ್ರಣದಲ್ಲಿಡುವ ಹೊಣೆ ಆರ್ಬಿಐಗೆ ಸೇರಿದೆ. ಶೇ.4ರಷ್ಟು ಹಣದುಬ್ಬರ ಕಾಯ್ದುಕೊಳ್ಳಬೇಕು. ಆದರೆ, ಶೇ.2ರಷ್ಟು ಇಳಿಕೆ ಅಥವಾ ಏರಿಕೆಯ ಮಿತಿಯನ್ನು ಹಾಕಿಕೊಂಡಿದೆ. ಅಂದರೆ ಶೇ.2-6ರ ನಡುವೆಯೇ ಹಣದುಬ್ಬರ ಕಾಯ್ದುಕೊಳ್ಳಬೇಕು. ಶೇ.6ರ ಗಡಿ ದಾಟಿದರೂ, ಶೇ.2ರ ಗಡಿಯಿಂದ ಕೆಳಕ್ಕಿಳಿದರೂ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ: ಕೈ ನಾಯಕರ ಬಂಧನಕ್ಕೆ ಡಿಕೆ ಶಿವಕುಮಾರ್ ಕಿಡಿ