ನವ ದೆಹಲಿ : ಕೇಂದ್ರ ಸಂಪುಟ ವಿಸ್ತರಣೆಯ ವಾಸನೆ ಬಡಿಯುತ್ತಿದ್ದಂತೆ ಹಿರಿಯ, ಕಿರಿಯ, ಪ್ರಭಾವಿ ಬಿಜೆಪಿ ನಾಯಕರುಗಳೆಲ್ಲ ಸಚಿವಗಿರಿಗೆ ತೆರೆಮರೆಯಲ್ಲೇ ಲಾಭ ನಡೆಸುತ್ತಿದ್ದು. ಗುಣಾಕಾರ, ಭಾಗಕಾರಗಳನ್ನೆಲ್ಲಾ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ವಲಸೆ ಬಂದ ನಾಯಕರುಗಳು ಸಹ ಹಿರಿ ತಲೆಗಳನ್ನು ಹಿಂದಿಕ್ಕಿ ತಾವು ಹೇಗೆ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
ಬುಧವಾರ ಮಧ್ಯಾಹ್ನದ ಹೊತ್ತಿಗೆ ಕೇಸರಿ ಪಾಳಯದ ಒಂದಷ್ಟು ಜನ ನೇರವಾಗಿ ಪ್ರಧಾನಿ ಮೋದಿಯವರ ಮನೆಗೆ ಹೊಕ್ಕಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ, ಭಿವಾಂಡಿ ಲೋಕಸಭಾ ಸಂಸದ ಕಪಿಲ್ ಪಾಟೀಲ್, ಬಿಜೆಪಿಯ ಉತ್ತರ ಪ್ರದೇಶದ ಅನುಪ್ರಿಯಾ ಪಟೇಲ್, ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಿಗಿದಿರುವ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ಉತ್ತರಾಖಂಡದ ಅಜಯ್ ಭಟ್ ಮತ್ತು ಕೇಸರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕ್ಯಾಬಿನೆಟ್ ವಿಸ್ತರಣೆಗೆ ಮುನ್ನ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಇವರಲ್ಲದೆ, ಸರ್ಬಾನಂದ ಸೋನೊವಾಲ್, ಭೂಪೇಂದರ್ ಯಾದವ್, ಅನುರಾಗ್ ಠಾಕೂರ್, ಮೀನಾಕ್ಷಿ ಲೆಖಿ, ಶೋಭಾ ಕರಂದ್ಲಾಜೆ, ಸುನೀತಾ ದುಗ್ಗ, ಪ್ರೀತಮ್ ಮುಂಡೆ, ಜಿ ಕಿಶನ್ ರೆಡ್ಡಿ, ಆರ್ಸಿಪಿ ಸಿಂಗ್, ಪಾರಶೋತ್ತಮ ರೂಪಾಲ ಮತ್ತು ಸಂತನು ಠಾಕೂರ್ ಸಹ ಲೋಕ್ ಕಲ್ಯಾಣ ಮಾರ್ಗದ ನಂ 7ರ ಮೋದಿಯವರ ಅಧಿಕೃತ ನಿವಾಸದಲ್ಲಿ ಬೀಡು ಬಿಟ್ಟಿದ್ದಾರೆ.