ಹೊಸದಿಲ್ಲಿ : ಪಟಾಕಿಗಳನ್ನು ನಿಷೇಧಿಸುವ ಮೂಲಕ ತಾನು ಯಾವುದೇ ನಿರ್ದಿಷ್ಟ ಗುಂಪು ಅಥವಾ ಸಮುದಾಯದ ವಿರುದ್ಧವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಫಷ್ಟಪಡಿಸಿದೆಯಲ್ಲದೆ.
ಖುಷಿ ಪಡುವ ನೆಪದಲ್ಲಿ ನಾಗರಿಕರ ಹಕ್ಕುಗಳ ಉಲ್ಲಂಘನೆಯನ್ನು ತಾನು ಅನುಮತಿಸುವ ಹಾಗಿಲ್ಲ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಆದೇಶ ಪೂರ್ಣವಾಗಿ ಜಾರಿಗೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಹಾಗೂ ಎ ಎಸ್ ಬೋಪಣ್ಣ ಅವರ ಪೀಠ ಹೇಳಿದೆ.
"ನೀವು ಜನರಿಗೆ ಖುಷಿ ನೀಡುತ್ತದೆ ಎಂದು ಹೇಳಿಕೊಂಡು ಜನರ ಜೀವನದೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ. ನಾವು ಯಾವುದೇ ಸಮುದಾಯದ ವಿರುದ್ಧವಲ್ಲ. ನಾವು ಇಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗಿದ್ದೇವೆ ಎಂಬ ಪ್ರಬಲ ಸಂದೇಶವನ್ನು ನಾವು ನೀಡಲು ಬಯಸಿದ್ದೇವೆ" ಎಂದು ನ್ಯಾಯಾಲಯ ಹೇಳಿದೆ.
"ನಾವೇನೂ ಪಟಾಕಿಗಳ ಮೇಲೆ ಶೇ 100 ನಿಷೇಧ ಹೇರಿಲ್ಲ. ದಿಲ್ಲಿಯಲ್ಲಿ ಪಟಾಕಿಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದ ಜನರು ನರಳುತ್ತಿದ್ದಾರೆಂದು ಎಲ್ಲರಿಗೂ ಗೊತ್ತು" ಎಂದು ನ್ಯಾಯಾಲಯ ಹೇಳಿದೆ.