ಪಾಟ್ನಾ : ದೇಶದ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದಿರುವ ಬಿಹಾರದಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ.
ಮೂರು ವರ್ಷಗಳಿಂದ ಬಿಜೆಪಿ ಜೊತೆಗೆ ಮೈತ್ರಿ ಸರ್ಕಾರ ನಡೆಸುತ್ತಿದ್ದ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿದ್ದಾರೆ.
ಆರ್ಜೆಡಿ-ಜೆಡಿಯು-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದ್ದು, ಬಿಹಾರದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಸಿಎಂ ನಿತೀಶ್ ಜೊತೆಗೆ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಳೆದ ಕೆಲ ದಿನಗಳಿಂದ ಬಿಜೆಪಿ ಜೊತೆ ಅಂತರ ಕಾಯ್ದುಕೊಂಡು, ಆರ್ಜೆಡಿ-ಕಾಂಗ್ರೆಸ್ ಸಂಪರ್ಕದಲ್ಲಿದ್ದ ನಿತೀಶ್ ಕುಮಾರ್ ಇಂದು ಬೆಳಗ್ಗೆ ಶಾಸಕರ ಸಭೆ ನಡೆಸಿ ಬಿಜೆಪಿ ಮೈತ್ರಿಗೆ ಟಾಟಾ ಹೇಳುತ್ತಿರುವ ಬಗ್ಗೆ, ಆರ್ಜೆಡಿ-ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡರು.
ನಿತೀಶ್ ಕುಮಾರ್ ನಿರ್ಧಾರಕ್ಕೆ ಇಡೀ ಸಭೆ ಸರ್ವಾನುಮತದಿಂದ ಬೆಂಬಲ ಸೂಚಿಸಿತು. ಸಂಜೆ ರಾಜ್ಯಪಾಲ ಫಾಗು ಚೌಹಾಣ್ ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಸ್ವಲ್ಪ ಹೊತ್ತಿನ ನಂತ್ರ ಆರ್ಜೆಡಿ-ಕಾಂಗ್ರೆಸ್ ಸೇರಿ ಇತರೆ ಪಕ್ಷಗಳೊಂದಿಗೆ ಜೊತೆಗೂಡಿ ಮಹಾಘಟಬಂಧನ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ರು. 164 ಶಾಸಕರ ಬೆಂಬಲ ಪತ್ರ ಕೊಟ್ಟ ನಿತೀಶ್ ಕುಮಾರ್, ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.