ಬೆಂಗಳೂರು : ಕೋರ್ಟ್ ಆದೇಶಗಳನ್ನು ಪಾಲನೆ ಮಾಡದ ಮತ್ತು ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ನಿರ್ದೇಶನವಿದ್ದರೂ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಹೈಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ಇಂಥ ದುರ್ವರ್ತನೆ ಪ್ರದರ್ಶಿಸುವ ಅಧಿಕಾರಿಗಳನ್ನು ಡಿಜಿಪಿಗೆ ಆದೇಶಿಸಿ ಬಂಧಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ, ಹೈಕೋರ್ಟ್ ಎಂದರೇನೆಂದು ತೋರಿಸಬೇಕಾಗುತ್ತದೆ, ತಕ್ಕ ಪಾಠ ಕಲಿಸಿ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಗೆ ಮೂಲಸೌಕರ್ಯ ಒದಗಿಸುವ ಹಾಗೂ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಕೋರಿದ್ದ ಪಿಐಎಲ್ ವಿಚಾರಣೆ ವೇಳೆ, ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇಬ್ಬರೂ ಗೈರು ಹಾಜರಾಗಿದ್ದಕ್ಕೆ ಕೋರ್ಟ್ ಕಿಡಿಕಾರಿತು.