Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ವರನನ್ನು ನಿರಾಕರಿಸಿದ ವಿಚಿತ್ರ ಘಟನೆ ಬುಧವಾರ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನಡೆದಿದೆ.
ನಾರಾವಿ ದೇವಸ್ಥಾನದ ಸನಿಹವಿರುವ ಸಭಾಭವನದಲ್ಲಿ ನಾರಾವಿಯ ಯುವಕನಿಗೂ ಶಿರ್ತಾಡಿ ಸನಿಹದ ಮೂಡುಕೊಣಾಜೆಯ ಯುವತಿಗೂ ಮದುವೆ ನಡೆಯುವುದರಲ್ಲಿತ್ತು.
ಸುಮಾರು 500ಕ್ಕೂ ಹೆಚ್ಚು ಮಂದಿ ಸೇರಿದ್ದು, ಸಮಾರಂಭ ಅದ್ದೂರಿಯಾಗಿಯೇ ಆಗುವುದರಲ್ಲಿತ್ತು. ಆದರೆ ಹಾರ ವಿನಿಮಯ ಸಂದರ್ಭ ವಧು ಯಾವುದೋ ತಗಾದೆ ತೆಗೆದಿದ್ದಾಳೆ. ಬಳಿಕ ತಾಳಿ ಕಟ್ಟುವ ವೇಳೆ ಈ ವರ ಬೇಡ ಎಂದು ಹಾರವನ್ನು ತೆಗೆದು ಬಿಸಾಡಿದ್ದಾಳೆಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ವಧುವಿನ ಆರೋಗ್ಯ ಏರುಪೇರಾಗಿದ್ದರಿಂದ ಆಕೆ ವಿಚಿತ್ರವಾಗಿ ವರ್ತಿಸ ತೊಡಗಿದ್ದಾಳೆಂದೂ ಜನರು ಹೇಳತೊಡಗಿದ್ದಾರೆ.ಈ ವಿದ್ಯಮಾನದಿಂದ ಗಂಡಿನ ಹಾಗೂ ಹೆಣ್ಣಿನ ಕಡೆಯವರ ಮಧ್ಯೆ ಕೆಲ ಕಾಲ ವಾಗ್ಯುದ್ಧ ನಡೆದಿದೆ. ವೇಣೂರು ಪೋಲಿಸರ ಆಗಮನವಾಗಿದೆ.
ತನ್ನನ್ನು ನೋಡಲು ಬಂದವನೊಬ್ಬ, ನಿಶ್ಚಯ ಆದದ್ದು ಇನ್ನೊಬ್ಬನೊಂದಿಗೆ, ಇವತ್ತು ಬಂದ ವರ ಬೇರೊಬ್ಬ ಎಂಬ ವಿಚಿತ್ರ ಹೇಳಿಕೆಯನ್ನು ಪೋಲಿಸರ ಮುಂದೆ ವಧು ಹೇಳಿದ್ದಾಳಂತೆ. ಘಟನೆಯ ಸುದ್ದಿ ವೈರಲ್ ಆಗಿದೆ.