ನವದೆಹಲಿ : ಭಾರೀ ವಿವಾದ ಸೃಷ್ಟಿಸಿದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯು ಉಭಯ ಸದನದಲ್ಲಿಯೂ ಅಂಗೀಕಾರ ಪಡೆದುಕೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಇದೊಂದು ‘ಕರಾಳ ದಿನ’. ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರವು ಭಾರತದ ಬಹುತ್ವದ ಮೇಲೆ ಸಂಕುಚಿತ ಮನಸ್ಸಿನ ಹಾಗೂ ಧರ್ಮಾಂಧ ಶಕ್ತಿಗಳ ವಿಜಯವನ್ನು ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಧರ್ಮ, ಪ್ರದೇಶ, ಜಾತಿ, ಮತ, ಭಾಷೆ ಅಥವಾ ಜನಾಂಗವನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿರುವ ಭಾರತವನ್ನು ಇದೀಗ ನಿರಾಕರಿಸುವಂತೆ ಮಾಡಲಾಗಿದೆ. ಎಲ್ಲಾ ಧರ್ಮಗಳಿಗೆ ಆಶ್ರಯ ನೀಡಿದ ಭಾರತವನ್ನು ಬಿಜೆಪಿ ಸರ್ಕಾರ ವಿಭಜಿಸಿದೆ ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.