ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಂಬಿಸಲು ಹೊರಟಿರುವ ಯತ್ನಕ್ಕೆ ಆರಂಭದಲ್ಲೇ ಅಪಸ್ವರಗಳು ಕೇಳಿಬಂದಿವೆ.
ಇತ್ತೀಚೆಗೆ ನಡೆದಿದ್ದ ವಿಪಕ್ಷಗಳ ಮೈತ್ರಿ ಕೂಟ ಇಂಡಿಯಾ ಸಭೆಯಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಗೆ ಮಲ್ಲಿಕಾರ್ಜುನ ಖರ್ಗೆ ಹೆಸರು ಸೂಚಿಸಿದ್ದರು. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇದೀಗ ಎನ್ ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅಪಸ್ವರವೆತ್ತಿದ್ದಾರೆ. ಪ್ರಧಾನಿ ಅಭ್ಯರ್ಥಿಗೆ ಖರ್ಗೆ ಹೆಸರು ಸೂಚಿಸುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮೂಲಕ ಮೈತ್ರಿ ಕೂಟದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಪೋಟಗೊಂಡಿದೆ.
ತುರ್ತು ಪರಿಸ್ಥಿತಿ ನಂತರ ನಡೆದಿದ್ದ 1977 ರ ಚುನಾವಣೆಯಲ್ಲೂ ಪ್ರಧಾನಿ ಅಭ್ಯರ್ಥಿ ಇಲ್ಲದೇ ಚುನಾವಣೆ ಎದುರಿಸಿ ಗೆದ್ದಿದ್ದೆವು. ಚುನಾವಣೆ ನಂತರ ಮೊರಾರ್ಜಿ ದೇಸಾಯಿಯವರನ್ನು ಪ್ರಧಾನಿಯಾಗಿ ಮಾಡಿದ್ದೆವು. ಈಗಲೂ ಪ್ರಧಾನಿ ಅಭ್ಯರ್ಥಿ ಯಾರೆಂದು ಮೊದಲೇ ಹೇಳದೇ ಇದ್ದರೆ ನಷ್ಟವೇನೂ ಆಗದು ಎಂದು ಶರದ್ ಪವಾರ್ ಹೇಳಿದ್ದಾರೆ.