ನವದೆಹಲಿ: ಚುನಾವಣಾ ನೀತಿ ಚಾಣಕ್ಷ್ಯ ಪ್ರಶಾಂತ್ ಕಿಶೋರ್-ಕಾಂಗ್ರೆಸ್ ನಾಯಕರ ನಡುವಿನ ಭೇಟಿ ಈಗ ರಾಜಕೀಯ ವಲಯದಲ್ಲಿ ಭಾರೀ ಸುದ್ದಿಯಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಾಣಲು ಶರದ್ ಪವಾರ್ ನೇತೃತ್ವದ ಎನ್ ಸಿಪಿ ಈಗಾಗಲೇ ಪ್ರಶಾಂತ್ ಕಿಶೋರ್ ಅವರ ಮೊರೆ ಹೋಗಿದೆ. ಇದೀಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಸೋನಿಯಾ ಗಾಂಧಿ ಮುಂತಾದ ಉನ್ನತ ನಾಯಕರೊಂದಿಗೆ ಸಭೆ ನಡೆಸಿರುವುದನ್ನು ನೋಡಿದರೆ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಚುನಾವಣೆ ಎದುರಿಸಲು ತಂತ್ರಗಾರಿಕೆ ಹೆಣೆಯುತ್ತಿರಬಹುದು ಎಂಬ ಅನುಮಾನ ಮೂಡಿಸಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ.
ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಹೇಗಾದರೂ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ವಿಪಕ್ಷಗಳು ಈಗಿನಿಂದಲೇ ತಯಾರಿ ಆರಂಭಿಸಿವೆ. ಕಾಂಗ್ರೆಸ್ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲೂ ಸೋತು ಸುಣ್ಣವಾಗಿತ್ತು. ಹೀಗಾಗಿ ಮತ್ತೆ ಫೀನಿಕ್ಸ್ ನಂತೆ ಮೇಲೆದ್ದು ಬರಲು ಪ್ರಶಾಂತ್ ಕಿಶೋರ್ ಮೊರೆ ಹೋಗಿದೆ ಎನ್ನಲಾಗಿದೆ.