ಚಂಡೀಗಢ: ಹರಿಯಾಣದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ಪಂಚಕುಲದಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಯಾಬ್ ಸಿಂಗ್ ಸೈನಿ ಅವರ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ವೀಕ್ಷಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಅನಿಲ್ ವಿಜ್ ಮತ್ತು ಕೃಷ್ಣಾ ಬೇಡಿ ಅವರು ನಯಾಬ್ ಸಿಂಗ್ ಸೈನಿ ಅವರ ಹೆಸರಿನ ಪ್ರಸ್ತಾವನೆ ಮುಂದಿಟ್ಟರು. ಪ್ರಸ್ತಾವನೆಗೆ ಅವಿರೋಧವಾಗಿ ಶಾಸಕರು ಬೆಂಬಲ ಸೂಚಿಸಿದ ಹಿನ್ನೆಲೆ ಸೈನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಯಿತು.
ನಾಳೆ ಬೆಳಿಗ್ಗೆ 11:30ಕ್ಕೆ ಪಂಚಕುಲದಲ್ಲಿ ನಯಾಬ್ ಸಿಂಗ್ ಸೈನಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಪುದುಚೆರಿ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬಡೋಲಿ ಮಾತನಾಡಿ, ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ 37 ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ. ಇವರಲ್ಲಿ ಕೇಂದ್ರ ಸಚಿವರು, ಎನ್‌ಡಿಎ ಘಟಕಗಳ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದ್ದಾರೆ. ನಾವು ಎಲ್ಲರೊಂದಿಗೆ ಸಂಪರ್ಕದಲ್ಲಿದ್ದೇವೆ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಕಾರ್ಯಕ್ರಮ ಆರಂಭವಾಗಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.