ನವದೆಹಲಿ: ರಾಜಧಾನಿ ನವದೆಹಲಿಯ ಮೂರು ಮಹಡಿಯ ವಾಣಿಜ್ಯ ಕಟ್ಟಡವೊಂದರಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 27 ಜನರು ಸಜೀವವಾಗಿ ದಹನವಾಗಿದ್ದಾರೆ. ಘಟನೆಯಲ್ಲಿ 70 ಜನರನ್ನು ರಕ್ಷಿಸಲಾಗಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ 10 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪದಲ್ಲೇ ಇರುವ ಕಟ್ಟಡಕ್ಕೆ ಬೆಂಕಿ ಬಿದ್ದ ಬಗ್ಗೆ ಸಂಜೆ 4.30ರ ವೇಳೆಗೆ ಅಗ್ನಿಶಾಮಕ ಕಚೇರಿಗೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ 30ಕ್ಕೂ ಹೆಚ್ಚು ಅಗ್ನಿಶಾಮಕ ತಂಡದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾದರು. ಆದರೆ ಬೆಂಕಿ ತಹಬದಿಗೆ ಬಂದರು, ಸಿಬ್ಬಂದಿ ಕೆಲವು ಕೋಣೆಯೊಳಗೆ ಪ್ರವೇಶಿಸಿದ ವೇಳೆ 27 ಜನರ ಶವ ಸಿಕ್ಕಿದೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.
ದುರ್ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೊದಲಾದ ಗಣ್ಯರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತಲಾ 2 ಲಕ್ಷ ರು. ಮತ್ತು ಗಾಯಾಳುಗಳ ಕುಟುಂಬಕ್ಕೆ ಪ್ರಧಾನಿ ಮೋದಿ ತಲಾ 50000 ರು. ಪರಿಹಾರ ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲಿಕರಾದ ಹರೀಶ್ ಗೋಯಲ್ ಮತ್ತು ವರುಣ್ ಗೋಯಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬೆಂಕಿ ಹಬ್ಬುತ್ತಲೇ ಕೆಳಗೆ ಬರಲು ದಾರಿ ಸಿಗದ ಕಾರಣ, ಹಲವಾರು ಜನರು 2 ಮತ್ತು 3ನೇ ಮಹಡಿಯಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಇನ್ನು ಕೆಲವರಿಗೆ ಇಂಥ ಯತ್ನದ ವೇಳೆ ಗಾಯಗಳಾಗಿದೆ, ಸಿಸಿಟೀವಿ ಮತ್ತು ರೂಟರ್‌ಗಳನ್ನು ಉತ್ಪಾದಿಸುವ ಕಂಪನಿಯೊಂದರ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿದೆ. ಅಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲಾ ಮಹಡಿಗಳಿಗೂ ಹಬ್ಬಿ ಭಾರೀ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.