ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗಣರಾಜ್ಯೋತ್ಸವ ದಿನದಂದೇ ಈ ಕರಾಳ ಘಟನೆ ನಡೆದಿದೆ. ಆರೋಪಿಗಳ ಜತೆಗಿನ ಮಹಿಳೆಯ ವೈಯಕ್ತಿಕ ವೈರತ್ವ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಕೂದಲನ್ನು ಕತ್ತರಿಸಿ, ಶೂಗಳ ಹಾರ ಹಾಕಿ, ಆಕೆಯ ಮುಖಕ್ಕೆ ಕಪ್ಪು ಮಸಿ ಬಳಿದು ಬೀದಿಯಲ್ಲಿ ಮೆರವಣಿಗೆ ಮಾಡಲಾಗಿದೆ. ಇದಕ್ಕೆ ಸ್ಥಳೀಯರು ಕೂಗಾಟಗಳೊಂದಿಗೆ ಬೆಂಬಲ ನೀಡಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೋ ಗುರುವಾರ ವೈರಲ್ ಆಗಿದೆ.
ಈ ಮಹಿಳೆ ವಿವಾಹಿತೆಯಾಗಿದ್ದು, ಒಂದು ಮಗು ಇದೆ. ನೆರೆಮನೆಯ ಯುವಕನೊಬ್ಬ ಈ ಮಹಿಳೆಯನ್ನು ಪದೇ ಪದೇ ಹಿಂಬಾಲಿಸುತ್ತಿದ್ದ. ಕಳೆದ ನವೆಂಬರ್ನಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಆತ್ಮಹತ್ಯೆಗೆ ಮಹಿಳೆಯೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಮಹಿಳೆ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಹೇಯ ಕೇತ್ಯದ ಬಗ್ಗೆ ಮಹಿಳೆಯ ತಂಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಗೆ ಕೌನ್ಸೆಲಿಂಗ್ ನೀಡಲಾಗುತ್ತಿದೆ.
'20 ವರ್ಷದ ಮಹಿಳೆ ಮೇಲೆ ಕಸ್ತೂರ್ಬಾ ನಗರದಲ್ಲಿ ಅಕ್ರಮ ಮದ್ಯ ಮಾರಾಟಗಾರರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆಕೆಯ ತಲೆಯನ್ನು ಬೋಳಿಸಿ ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ. ಬಳಿಕ ಆಕೆಯನ್ನು ಚಪ್ಪಲಿ ಹಾರ ಹಾಕಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಲಾಗಿದೆ.
ನಾನು ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡುತ್ತಿದ್ದೇನೆ. ಎಲ್ಲ ಆರೋಪಿ ಪುರುಷರು ಮತ್ತು ಮಹಿಳೆಯರನ್ನು ಬಂಧಿಸಬೇಕು. ಮಹಿಳೆಯ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ಒದಗಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.