ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮರಿಗಾಗಿ ವೆಬ್‌ಸೈಟ್ ಪ್ರಾರಂಭಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಅವರು ಮಾಡಿದ ತ್ಯಾಗ- ಬಲಿದಾನದ ಬಗ್ಗೆ ಯುವಕರಲ್ಲಿ ಅರಿವು ಮತ್ತು ದೇಶಭಕ್ತಿಯ ಭಾವನೆ ಮೂಡಿಸಲು ಕೇಜ್ರಿವಾಲ್ ಸರ್ಕಾರ ಈ ನಡೆಯನ್ನಿಡುತ್ತಿದೆ.
ಭಗತ್ ಸಿಂಗ್ ಅವರ 110ನೇ ಜನ್ಮದಿನವಾದ ಸೆಪ್ಟೆಂಬರ್ 27ರಂದು ಈ ವೆಬ್‌ಸೈಟ್‌ನ್ನು ಆರಂಭಿಸಲಾಗುತ್ತಿದೆ. ಅಂದು ತಲಕಟೋರಾ ದೇಶಭಕ್ತಿಯ ಕಥಾಹಂದರವುಳ್ಳ ' ಶಹೀದ್ ಉತ್ಸವ ' ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಲಾಗುವುದು ಎಂದು ಕಾರ್ಮಿಕ ಮತ್ತು ಸಾಮಾನ್ಯ ಆಡಳಿತ ಇಲಾಖೆ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರಿಗೆ ಗೌರವ ನೀಡುವ ಉದ್ದೇಶದಿಂದ ನಾವು ವೆಬ್‌ಸೈಟ್‌ನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲಾ 29 ರಾಜ್ಯ ಸರ್ಕಾರಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಜತೆ ಮಾತನಾಡಲಾಗಿದ್ದು ಸ್ವಾತಂತ್ರ್ಯ ಯೋಧರು, ಹುತಾತ್ಮರ ನಿಕಟ ಸಂಬಂಧಿಗಳ ಹೆಸರನ್ನು ನಾಮ ನಿರ್ದೇಶನ ಮಾಡಲು ಕೋರಲಾಗಿದೆ. ಅವರನ್ನು 'ಶಹೀದ್ ಉತ್ಸವ'ನಲ್ಲಿ ಸನ್ಮಾನಿಸಲಾಗುವುದು ಎಂದಿದ್ದಾರೆ ರಾಯ್.
"ಬಾಂಗ್ಲಾದೇಶ, ಮಯನ್ಮಾರ್, ಯುನೈಟೆಡ್ ಕಿಂಗ್ಡಮ್ , ಕೆನಡಾ, ಅಮೇರಿಕಾದ ಮೊದಲಾದ ವಿದೇಶಗಳ ಸರ್ಕಾರಗಳನ್ನು ಅಲ್ಲಿಯ ರಾಯಭಾರಿಗಳ ಮೂಲಕ ಸಂಪರ್ಕಿಸಿ ಅಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಯೋಧರು ಮತ್ತು ಹುತಾತ್ಮರುಗಳ ಅಥವಾ ಅವರ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಪಡೆಯಲಾಗುವುದು ," ಎಂದಿದ್ದಾರೆ ರೈ.
ಜತೆಗೆ ಸ್ವಾತಂತ್ರ್ಯ ಯೋಧರು ಮತ್ತು ಹುತಾತ್ಮರುಗಳ ಭಾವಚಿತ್ರ ಮತ್ತು ವಿವರಗಳನ್ನು ನಮಗೆ ತಲುಪಿಸಲು ಸಾರ್ವಜನಿಕರಿಗೂ ವೇದಿಕೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ