ಹರ್ಯಾಣ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ಕಾಂಗ್ರೆಸ್ ಮತ ಯಂತ್ರದಲ್ಲಿನ ದೋಷಗಳ ಬಗ್ಗೆ ಅಧ್ಯಯನ ನಡೆಯಲು ತಾಂತ್ರಿಕ ಸಮಿತಿಯೊಂದನ್ನು ರಚನೆ ಮಾಡಿದೆ.
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್ ವರದಿಗಳು ಹೇಳಿದ್ದವು. ಆದರೆ ಬಿಜೆಪಿಯೇ ಮತ್ತೆ ಮೂರನೇ ಬಾರಿಗೆ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ಇದಾದ ಬಳಿಕ ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಸಂಶಯ ವ್ಯಕ್ತಪಡಿಸಿತ್ತು.
ರಾಹುಲ್ ಗಾಂಧಿ ಕೂಡಾ ನಿನ್ನೆ ಟ್ವೀಟ್ ಮಾಡಿ ನಮಗೆ ಇತ್ತೀಚೆಗೆ ನಡೆದ ಕೆಲವು ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಅನುಮಾನವಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಈಗ ತಾಂತ್ರಿಕ ಸಮಿತಿ ರಚನೆ ಮಾಡಲು ಮುಂದಾಗಿದೆ.
ಹರ್ಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮತ ಯಂತ್ರದ ಬಗ್ಗೆ ವ್ಯಕ್ತಪಡಸಿರುವ ಸಂಶಯಗಳ ಬಗ್ಗೆ ಈ ತಾಂತ್ರಿಕ ಸಮಿತಿ ತನಿಖೆ ನಡೆಸಲಿದೆ. ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ಅಶೋಕ್ ಗೆಹ್ಲೋಟ್, ಕೆಸಿ ವೇಣುಗೋಪಾಲ್, ಜೈ ರಾಮ್ ರಮೇಶ್, ಅಜಯ್ ಮಕೇನ್ ಮೊದಲಾದವರು ಸಭೆ ಸೇರಿಸಿ ಚರ್ಚೆ ನಡೆಸಿ ಈ ಸಮಿತಿ ರಚನೆ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ.