ಹರ್ಯಾಣ: ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ ಎಣಿಕೆಯಲ್ಲಿ ಅಕ್ರಮಗಳಾಗುತ್ತಿವೆ. ಈ ಬಗ್ಗೆ ದೂರು ಕೊಡಲಿದ್ದೇವೆ ಎಂದಿದ್ದಾರೆ.
ಹರ್ಯಾಣ ಸೇರಿದಂತೆ ಇತ್ತೀಚೆಗೆ ನಡೆದ ಕೆಲವು ವಿಧಾನಸಭೆ ಚುನಾವಣೆಯಲ್ಲಿ ಮತ ಎಣಿಕೆಯಲ್ಲಿ ಅಕ್ರಮವಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ. ಹರ್ಯಾಣದಲ್ಲಿ ಸೋಲಿನ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಜನತೆಗೆ ನನ್ನ ಹೃದಯಪೂರ್ವಕ ವಂದನೆಗಳು. ಇಂಡಿಯಾ ಒಕ್ಕೂಟದ ಗೆಲುವು ಪ್ರಜಾಪ್ರಭುತ್ವದ ಗೆಲುವು, ಪ್ರಜಾಪ್ರಭುತ್ವದ ಸ್ವಾಭಿಮಾನದ ಗೆಲುವಾಗಿದೆ. ನಾವು ಹರ್ಯಾಣದ ಅನಿರೀಕ್ಷಿತ ಸೋಲಿನ ವಿಶ್ಲೇಷಣೆ ನಡೆಸಲಿದ್ದೇವೆ. ಇತ್ತೀಚೆಗೆ ನಡೆದ ಹಲವು ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ಕೊಡಲಿದ್ದೇವೆ. ಹರ್ಯಾಣ ವಾಸಿಗಳ ತೀರ್ಪಿಗೆ ಮತ್ತು ನಮ್ಮ ಹುಲಿಗಳಂತಹಾ ಕಾರ್ಯಕರ್ತರ ಪರಿಶ್ರಮಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ನಮ್ಮ ಹಕ್ಕಿಗಾಗಿ, ಆರ್ಥಿಕ ನ್ಯಾಯಕ್ಕಾಗಿ, ಈ ಸತ್ಯದ ಹೋರಾಟ ಮುಂದುವರಿಯುತ್ತಲೇ ಇರುತ್ತದೆ. ನಿಮ್ಮ ಸಾಥ್ ನಮ್ಮ ಜೊತೆಗಿರಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಿನ್ನೆ ಮತ ಎಣಿಕೆ ನಡೆಯುತ್ತಿದ್ದಾಗಲೇ ಕಾಂಗ್ರೆಸ್ ನಾಯಕ ಜೈ ರಾಂ ರಮೇಶ್ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ನೀಡುತ್ತಿರುವ ವರದಿಗಳ ಬಗ್ಗೆ ಅಪಸ್ವರವೆತ್ತಿದ್ದರು. ಇದೀಗ ರಾಹುಲ್ ಗಾಂಧಿ ಕೂಡಾ ಚುನಾವಣಾ ಆಯೋಗಕ್ಕೆ ದೂರು ನೀಡುವ ಮಾತುಗಳನ್ನಾಡಿದ್ದಾರೆ.