ಕಾಶ್ಮೀರ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೃಹತ್ ಪಕ್ಷವಾಗಿ ಹೊರಹೊಮ್ಮಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಈಗ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಆದರೆ ಒಮರ್ ಅಬ್ದುಲ್ಲಾಗೆ ಬಹುಮತದೊಂದಿಗೆ ಸರ್ಕಾರ ರಚಿಸಲು ಕೆಲವೇ ಸ್ಥಾನಗಳ ಕೊರತೆಯಿದ್ದು ಇದನ್ನು ಪಕ್ಷೇತರರು ನೀಗಿಸಲಿದ್ದಾರೆ. ಒಮರ್ ಅಬ್ದುಲ್ಲಾ ಪಕ್ಷಕ್ಕೆ ಈಗಾಗಲೇ ಪಕ್ಷೇತರರು ಬೆಂಬಲ ಘೋಷಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇತರರು 7 ಸ್ಥಾನಗಳನ್ನು ಗೆದ್ದುಕೊಂಡಿದ್ದರು.
ಇದೀಗ ಒಮರ್ ಪಕ್ಷಕ್ಕೆ ಇತರರು ಬೆಂಬಲ ಘೋಷಿಸಿರುವುದರಿಂದ ಕಾಂಗ್ರೆಸ್ ಅಥವಾ ಬಿಜೆಪಿಯ ಸಹಾಯವಿಲ್ಲದೇ ಸರ್ಕಾರ ರಚಿಸಬಹುದಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ ಗೆ ಡಿಚ್ಚಿ ಹೊಡೆದು ಇತರರ ಜೊತೆ ಸೇರಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ.
ಈ ನಡುವೆ ಒಮರ್ ಅಬ್ದುಲ್ಲಾ ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲ ಘೋಷಿಸಬೇಕಾ ಬೇಡವಾ ಎಂಬ ಬಗ್ಗೆ ಕಾಂಗ್ರೆಸ್ ಇಂದು ತೀರ್ಮಾನ ತೆಗೆದುಕೊಳ್ಳಲಿದೆ. ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಗೆದ್ದ ಬಳಿಕ ಒಮರ್ ಕೇಂದ್ರ ಸರ್ಕಾರ ಹಾಗೂ ಮೋದಿಯನ್ನು ಹೊಗಳಿದ್ದು ಕಾಂಗ್ರೆಸ್ ಅಸಮಾಧಾನಕ್ಕೆ ಗುರಿಯಾಗಿದೆ. ಹೀಗಾಗಿ ಇಂದು ಜಮ್ಮುವಿನಲ್ಲಿ ರಚನೆಯಾಗಲಿರುವ ನೂತನ ಸರ್ಕಾರಕ್ಕೆ ಬೆಂಬಲ ಘೋಷಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.