ನವದೆಹಲಿ : ಕಲ್ಲಿದ್ದಲು ದಾಸ್ತಾನು ಕುಸಿತವಾಗಿದ್ದು, ಥರ್ಮಲ್ ವಿದ್ಯುತ್ ಘಟಕಗಳ ಕೆಲಸ ಕುಂಠಿತಗೊಂಡಿದೆ.
ಹೀಗಾಗಿ 12 ರಾಜ್ಯಗಳಲ್ಲಿ ವಿದ್ಯುತ್ ಬಿಕ್ಕಟ್ಟು ಎದುರಾಗಬಹುದು ಎಂದು ಅಖಿಲ ಭಾರತ ಎಂಜಿನಿಯರ್ಸ್ ಫೆಡರೇಷನ್ (ಎಐಪಿಇಇ) ಎಚ್ಚರಿಕೆ ನೀಡಿದೆ.
2022ರ ಏಪ್ರಿಲ್ ಮೊದಲರ್ಧ ಭಾಗದಲ್ಲಿ ದೇಶೀಯ ವಿದ್ಯುತ್ ಬೇಡಿಕೆ 38 ವರ್ಷದ ಗರಿಷ್ಠಕ್ಕೆ ಮುಟ್ಟಿದೆ. ಅಕ್ಟೋಬರ್ 2021ರಲ್ಲಿ ಕಲ್ಲಿದ್ದಲು ಕೊರತೆ ಶೇ.1.1ರಷ್ಟಿತ್ತು. ಅದು 2022ರ ಏಪ್ರಿಲ್ನಲ್ಲಿ ಶೇ.1.4ಕ್ಕೆ ಏರಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಜಾರ್ಖಂಡ್ ಹಾಗೂ ಹರಾರಯಣದಂಥ ರಾಜ್ಯಗಳಲ್ಲಿ ವಿದ್ಯುತ್ ಕಡಿತವಾಗುತ್ತಿದೆ.
ಉತ್ತರಪ್ರದೇಶದಲ್ಲಿ ಬೇಡಿಕೆ 21000 ಮೆಗಾವ್ಯಾಟ್ ತಲುಪಿದ್ದರೆ, ಪೂರೈಕೆ 19000-20000 ಮೆಗಾವ್ಯಾಟ್ನಷ್ಟಿದೆ. ಹೀಗಾಗಿ ಥರ್ಮಲ್ ಘಟಕಕ್ಕೆ ಕಲ್ಲಿದ್ದಲು ಪೂರೈಕೆ ಚುರುಕುಗೊಳಿಸಿ ಬಿಕ್ಕಟ್ಟು ಪರಿಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಫೆಡರೇಷನ್ ಆಗ್ರಹಿಸಿದೆ.
ಕಳೆದ ವರ್ಷ ಸುರಿದ ಭಾರೀ ಮಳೆ, ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ ಪರಿಣಾಮ ದರ ಏರಿಕೆ ಮೊದಲಾದ ಕಾರಣಗಳಿಂದಾಗಿ ದೇಶದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಳೆದೊಂದು ವರ್ಷದಿಂದ ಭಾರೀ ಪ್ರಮಾಣದಲ್ಲಿ ಕುಸಿದಿದೆ.