ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಟಿಡಿಪಿ ಅಧಿಕಾರಕ್ಕೇರುತ್ತಿದ್ದಂತೇ ಕೆಲವು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಚಂದ್ರಬಾಬು ನಾಯ್ಡು ಭಯ ಶುರುವಾಗಿದೆ.
ಇಷ್ಟು ದಿನ ಜಗನ್ ರೆಡ್ಡಿಗೆ ವಿಧೇಯರಾಗಿದ್ದ ಕೆಲವು ಅಧಿಕಾರಿಗಳು ಚಂದ್ರಬಾಬು ನಾಯ್ಡುಗೆ ಕಿರುಕುಳ ಕೊಟ್ಟಿದ್ದರು. ಇದೀಗ ಚಂದ್ರಬಾಬು ನಾಯ್ಡು ಅಧಿಕಾರಕ್ಕೇರುತ್ತಿದ್ದಂತೇ ಎಲ್ಲಿ ನಮ್ಮ ಗ್ರಹಚಾರ ಬಿಡಿಸಿ ಬಿಡುತ್ತಾ ಎಂದು ಈ ಅಧಿಕಾರಿಗಳಿಗೆ ಭಯ ಶುರುವಾಗಿದೆ.
ಅದಕ್ಕಾಗಿ ಚಂದ್ರಬಾಬು ನಾಯ್ಡು ನಿವಾಸದ ಮುಂದೆ ಈಗ ಅಧಿಕಾರಿಗಳ ದಂಡೇ ಕ್ಯೂ ನಿಂತಿದೆ. ಆ ಮೂಲಕ ಚಂದ್ರಬಾಬು ನಾಯ್ಡುರನ್ನು ಪಾಕೆಟ್ ಮಾಡಲು ನೋಡುತ್ತಿದ್ದಾರೆ. ಇವರಲ್ಲಿ ಚಂದ್ರಬಾಬು ನಾಯ್ಡುರನ್ನು ಈ ಮೊದಲು ಅರೆಸ್ಟ್ ಮಾಡಿದ್ದ ಐಪಿಎಸ್ ಅಧಿಕಾರಿ ಕೊಲ್ಲಿ ರಘುರಾಮಿ ರೆಡ್ಡಿ, ಗುಪ್ತಚರ ಇಲಾಖೆಯ ಮಾಜಿ ಆಯುಕ್ತ ಆಂಜನೇಯುಲು ಮುಂತಾದವರು ಸೇರಿದ್ದಾರೆ. ಆದರೆ ಚಂದ್ರಬಾಬು ನಾಯ್ಡು ಅವರ ಭದ್ರತಾ ಸಿಬ್ಬಂದಿ ಅಪಾಯಿಂಟ್ ಮೆಂಟ್ ಇಲ್ಲ ಎಂಬ ಕಾರಣಕ್ಕೆ ಇವರನ್ನು ಒಳಗೇ ಬಿಟ್ಟುಕೊಂಡಿಲ್ಲ.
ಕೆಲವರು ಫೋನ್ ಮೂಲಕವೂ ಚಂದ್ರಬಾಬು ನಾಯ್ಡು ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರು ಯಾರನ್ನೂ ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ ಎಂದು ತಿಳಿದುಬಂದಿದೆ. ಅಧಿಕಾರ ಕಳೆದುಕೊಂಡಿದ್ದಾಗ ತಮ್ಮ ಮೇಲೆ ಕೇಸ್, ಅರೆಸ್ಟ್ ಎಂದು ಅಲೆದಾಡಿಸಿದ್ದವರನ್ನು ಚಂದ್ರಬಾಬು ನಾಯ್ಡು ಕೂಡಾ ಕಡೆಗಣಿಸುತ್ತಿದ್ದಾರೆ.