ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ನಿನ್ನೆ ಯಾವುದೇ ಪಕ್ಷ ಬಹುಮತ ಸಾಧಿಸದೇ ಇದ್ದಾಗ ಷೇರು ಮಾರುಕಟ್ಟೆ ದಿಡೀರ್ ಇಳಿಕೆ ಕಂಡಿತ್ತು. ಆದರೆ ಇಂದು ಷೇರು ಮಾರುಕಟ್ಟೆ ಮತ್ತೆ ಏರಿಕೆ ಕಾಣುತ್ತಿದೆ. ಇದಕ್ಕೆಲ್ಲಾ ಚಂದ್ರಬಾಬು ನಾಯ್ಡು ಮಹಿಮೆಯೇ ಕಾರಣ.
ಎಕ್ಸಿಟ್ ಪೋಲ್ ಫಲಿತಾಂಶ ಬಂದ ಮೇಲೆ ಷೇರು ಮಾರುಕಟ್ಟೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ನಿನ್ನೆ ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೇ ಭಾರೀ ಇಳಿಕೆಯಾಗಿತ್ತು.
ಆದರೆ ಇಂದು ಅಪರಾಹ್ನದ ನಂತರ ಸೆನ್ಸೆಕ್ಸ್ ದಿಡೀರ್ 2200 ಪಾಯಿಂಟ್ ದಾಟಿದೆ. ನಿನ್ನೆಗಿಂತ ಇಂದು 3.08% ಏರಿಕೆ ಕಂಡಿದೆ. ಇನ್ನು, ನಿಫ್ಟಿ ಬ್ಯಾಂಕ್ 2000 ಪಾಯಿಂಟ್ ದಾಟಿದೆ. ನಿಫ್ಟಿ ಫಿಫ್ಟಿ 702 ಗಳಷ್ಟಾಗಿದೆ. ನಿನ್ನೆಗಿಂತ ನಿಫ್ಟಿ ಬ್ಯಾಂಕ್ 4 ಪರ್ಸೆಂಟ್ ಏರಿಕೆ ಕಂಡಿದೆ. ಬೆಳಿಗ್ಗಿನ ಅವಧಿಯಲ್ಲಿ 200 ಪಾಯಿಂಟ್ ಗಳಷ್ಟೇ ಏರಿಕೆಯಿತ್ತಷ್ಟೆ. ಇದೀಗ ಇಷ್ಟರ ಮಟ್ಟಿಗೆ ಏರಿಕೆಯಾಗಿರುವುದಕ್ಕೆ ಚಂದ್ರಬಾಬು ನಾಯ್ಡು ಎನ್ ಡಿಎಗೆ ಬೆಂಬಲ ಘೋಷಿಸಿರುವುದೇ ಕಾರಣ.
ಬಿಜೆಪಿಗೆ ಬಹುಮತ ಬಾರದ ಹಿನ್ನಲೆಯಲ್ಲಿ ಸರ್ಕಾರ ರಚನೆಗೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಬೆಂಬಲ ನೀಡುತ್ತಿದ್ದಾರೆ. ಇದರ ಬಗ್ಗೆ ಇಂದು ಅವರು ಅಧಿಕೃತವಾಗಿ ಘೋಷಣೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮೋದಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದು, ಶನಿವಾರ ಮತ್ತೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ. ಮತ್ತೆ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದು ಪಕ್ಕಾ ಆಗುತ್ತಿದ್ದಂತೇ ಷೇರು ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾಗಿದೆ.