ನವದೆಹಲಿ : ಉಗ್ರಸ್ವರೂಪ ಪಡೆದುಕೊಂಡು ಮುನ್ನುಗ್ಗುತ್ತಿರುವ ಬಿಪರ್ಜಾಯ್ ಚಂಡಮಾರುತ ಇಂದು ಸಂಜೆ ಗುಜರಾತ್ನ ಕಛ್ ತೀರಕ್ಕೆ ಅಪ್ಪಳಿಸಲಿದೆ.
ಸಂಜೆ 4 ಮತ್ತು ರಾತ್ರಿ 8 ಗಂಟೆಯ ಒಳಗಡೆ ಚಂಡಮಾರುತ ಕಛ್ ತೀರಕ್ಕೆ ಅಪ್ಪಳಿಸಿ ಪಾಕಿಸ್ತಾನದ ಕಡೆಗೆ ಸಾಗಲಿದೆ. ಕಳೆದ 58 ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದೊಡ್ಡ ಚಂಡಮಾರುತ ಇದಾಗಿದ್ದು ಅರಬ್ಬಿ ಸಮುದ್ರದ ಸಮೀಪದ ಪ್ರದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಗುಜರಾತ್ನ ಸೌರಾಷ್ಟ್ರ, ಕಛ್, ಜಾಮ್ನಗರ, ದ್ವಾರಕಾ ಸೇರಿ 8 ಜಿಲ್ಲೆಗಳಿಗೆ ಹೈಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಮುದ್ರ ತೀರದಿಂದ 10 ಕಿ.ಮೀ. ಅಂತರದಲ್ಲಿನ ಸುಮಾರು 74 ಸಾವಿರ ಮಂದಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.
ಪಶ್ಚಿಮ ರೈಲ್ವೇ 76 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಗಾಳಿಯ ವೇಗ ಗಂಟೆಗೆ 125 ರಿಂದ 150 ಕಿ.ಮೀ ಇರಲಿದ್ದು, ಪ್ರವಾಹ ಪರಿಸ್ಥಿತಿಯೂ ಎದುರಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.