ನವದೆಹಲಿ(ಜು.24): ದೇಶದಲ್ಲಿ ಲಸಿಕಾ ಅಭಿಯಾನದ ಮೂಲಕ ಭಾರತ ಕೊರೋನಾ ವಿರುದ್ಧ ಶಕ್ತ ಹೋರಾಟ ಮಾಡುತ್ತಿದೆ. ಇದೀಗ ದೇಶದ ಕೊರೋನಾ ಡೋಸ್ 44.53 ಕೋಟಿ ದಾಟಿದೆ. ಹೊಸ ಕೊರೋನಾ ನೀತಿಯಿಂದ ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ 2.98 ಕೋಟಿ ಡೋಸ್ಗಿಂತ ಹೆಚ್ಚು ಲಸಿಕೆ ಬಳಕೆಯಾಗದೇ ಉಳಿದಿದೆ.
•ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 44.53 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಪೂರೈಕೆ
•ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.98 ಕೋಟಿ ಡೋಸ್ಗಿಂತ ಹೆಚ್ಚು
ದೇಶವ್ಯಾಪಿ ಲಸಿಕೆ ನೀಡಿಕೆ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ಪೂರೈಸುತ್ತಾ ಬಂದಿದೆ. ಆಂದೋಲನ ಸಾರ್ವತ್ರೀಕರಣದ ಹೊಸ ಹಂತದಲ್ಲಿ ಕೇಂದ್ರ ಸರ್ಕಾರವು, ದೇಶೀಯ ಲಸಿಕೆ ತಯಾರಿಕಾ ಕಂಪನಿಗಳಿಂದ 75% ಲಸಿಕೆಯನ್ನು ಖರೀದಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆಯನ್ನು ವಿತರಿಸುತ್ತಿದೆ.
ಒಟ್ಟು 44.53 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ 44,53,86,390 ಡೋಸ್ ಲಸಿಕೆಯನ್ನು ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲ ಖರೀದಿ ಮೂಲಗಳಿಂದ ಈಗಾಗಲೇ ವಿತರಿಸಲಾಗಿದ್ದು, ಸದ್ಯದಲ್ಲೇ ಹೆಚ್ಚುವರಿ 85,58,360 ಡೋಸ್ ಲಸಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಾಗಲಿದೆ.
44.53 ಕೋಟಿ ಡೋಸ್ ಲಸಿಕೆಯ ಪೈಕಿ ಸವಕಳಿ ಸೇರಿದಂತೆ 41,55,50,543 ಡೋಸ್ ಲಸಿಕೆ ಬಳಕೆಯಾಗಿದೆ ಎಂಬ ವಿಚಾರ ಇಂದು ಬೆಳಗ್ಗೆ 8 ಗಂಟೆಗೆ ಬಿಡುಗಡೆ ಆಗಿರುವ ದತ್ತಾಂಶದಿಂದ ತಿಳಿದುಬಂದಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.98 ಕೋಟಿಗಿಂತ ಹೆಚ್ಚಿನ ಡೋಸ್ ಅಂದರೆ 2,98,35,847 ಡೋಸ್ ಲಸಿಕೆ ಇನ್ನೂ ಬಳಕೆಗೆ ಲಭ್ಯವಿದೆ