ನವದೆಹಲಿ(ಜು.24): ಕೊರೋನಾ 2ನೇ ಅಲೆಯಲ್ಲಿ ಭಾರತ ತೀವ್ರವಾಗಿ ಆಕ್ಸಿಜನ್ ಕೊರತೆ ಎದುರಿಸಿತ್ತು. ಈ ವೇಳೆ ಭಾರಿತೀಯ ರೈಲ್ವೆಯ ಆಕ್ಸಿಜನ್ ಎಕ್ಸ್ಪ್ರೆಸ್ ದೇಶದ ಮೂಲೆ ಮೂಲೆಗೆ ಆಮ್ಲಜನಕ ಹೊತ್ತು ಸಾಗಿತು. ಈ ಮೂಲಕ ದೇಶದ ಆಕ್ಸಿಜನ್ ಕೊರತೆಯನ್ನು ಪರಿಹರಿಸಿತ್ತು. ಇದೀಗ ಭಾರತದ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಬಾಂಗ್ಲಾದೇಶಕ್ಕೆ 200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲಿದೆ.
•ಭಾರತೀಯ ರೈಲ್ವೆಯಿಂದ ಮತ್ತೊಂದು ಮಹತ್ವದ ಹೆಜ್ಜೆ
•ಬಾಂಗ್ಲಾದೇಶಕ್ಕೆ 200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ನಿರ್ಧಾರ
•ಭಾರತದಿಂದ ಬಾಂಗ್ಲಾದೇಶಕ್ಕೆ ಸಾಗಲಿಗೆ ಆಕ್ಸಿಜನ್
ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಅತಿ ಶೀಘ್ರವೇ ಬಾಂಗ್ಲಾದೇಶಕ್ಕೆ ತನ್ನ ಪ್ರಯಾಣ ಬೆಳೆಸಲಿದೆ. ಇದೇ ಮೊದಲ ಬಾರಿಗೆ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ನೆರೆ ರಾಷ್ಟ್ರಕ್ಕೆ ತನ್ನ ಪ್ರಯಾಣ ಮತ್ತು ಸೇವಾ ಕಾರ್ಯಾಚರಣೆ ಆರಂಭಿಸುತ್ತಿದೆ. ಬಾಂಗ್ಲಾದೇಶದ ಬೆನಪೋಲ್ಗೆ 200 ಮೆಟ್ರಿಕ್ ಟನ್ ತೂಕದ ವೈದ್ಯಕೀಯ ಆಮ್ಲಜನಕ ಸಾಗಿಸಲು ಆಗ್ನೇಯ ರೈಲ್ವೆ ಇಲಾಖೆಯು ಇಂದು ಚಕ್ರಧಾರ್ಪುರ್ ವಿಭಾಗದ ಟಾಟಾದಲ್ಲಿ ಬೇಡಿಕೆ ಪತ್ರ ಸಲ್ಲಿಸಿದೆ.
200 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು 10 ಕಂಟೈನರ್|ಗಳಿಗೆ ಭರ್ತಿ ಮಾಡಿ, ಬೋಗಿಗಳಿಗೆ ತುಂಬಿ, ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಪ್ರಯಾಣಕ್ಕೆ ಸಜ್ಜುಗೊಳಿಸಲಾಗಿದೆ.
ಕೊರೊನಾ 2ನೇ ಅಲೆ ದೇಶದಲ್ಲಿ ವ್ಯಾಪಕವಾದಾಗ, ದೇಶದೆಲ್ಲೆಡೆ ಎದುರಾದ ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸಲು ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು, 2021 ಏಪ್ರಿಲ್ 24ರಂದು ಕಾರ್ಯಾಚರಣೆ ಆರಂಭಿಸಿದವು. ದೇಶದ 15 ರಾಜ್ಯಗಳಿಗೆ 35,000 ಮೆಟ್ರಿಕ್ ಟನ್ ಗಿಂತ ಹೆಚ್ಚಿನ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಿಸಲು 480ಕ್ಕಿಂತ ಹೆಚ್ಚಿನ ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸಿದವು.
ಭಾರತೀಯ ರೈಲ್ವೆಯು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಲು ಪ್ರಯತ್ನಿಸುತ್ತಿದೆ